ಅಜ್ಮೀರ್: ರೈಲು ಹಳಿಗಳ ಮೇಲೆ ಸಿಮೆಂಟ್ ಇಟ್ಟಿಗೆ ಇರಿಸಿ ರೈಲು ಹಳಿ ತಪ್ಪಿಸಲು ಪ್ರಯತ್ನ
ಜೈಪುರ: ಪಶ್ಚಿಮದ ಮೀಸಲು ಸರಕು ಸಾಗಾಟ ಕಾರಿಡರ್‌ನ ಹಳಿಯಲ್ಲಿ ಎರಡು ಸಿಮೆಂಟ್ ಇಟ್ಟಿಗೆಗಳನ್ನು ಇರಿಸುವ ಮೂಲಕ ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ಸರಕು ತುಂಬಿದ ಗೂಡ್ಸ್ ರೈಲನ್ನು ಹಳಿ ತಪ್ಪಿಸಲು ಪ್ರಯತ್ನಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಗೂಡ್ಸ್ ರೈಲು ತಲಾ 70 ಕಿ.ಗ್ರಾಂ. ತೂಕವಿರುವ ಇಟ್ಟಿಗೆಗಳಿಗೆ ಢಿಕ್ಕಿ ಹೊಡೆದಿದೆ. ಆದರೆ, ಯಾವುದೇ ದುರ್ಘಟನೆ ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
‘‘ಕೆಲವು ದುಷ್ಕರ್ಮಿಗಳು ಮೀಸಲು ಸರಕು ಸಾಗಾಟ ಕಾರಿಡರ್‌ನಲ್ಲಿ ರವಿವಾರ ಎರಡು ಸಿಮೆಂಟ್ ಇಟ್ಟಿಗೆಗಳನ್ನು ಇರಿಸಿದ್ದರು. ಗೂಡ್ಸ್ ರೈಲು ಅದಕ್ಕೆ ಢಿಕ್ಕಿ ಹೊಡೆದಿದೆ’’ ಎಂದು ವಾಯುವ್ಯ ರೈಲ್ವೆಯ ಅಧಿಕಾರಿ ತಿಳಿಸಿದ್ದಾರೆ.
ಫುಲೇರಾ-ಅಹ್ಮದಾಬಾದ್ ಮಾರ್ಗದ ಪಶ್ಚಿಮ ಮೀಸಲು ಸರಕು ಸಾಗಾಟ ಕಾರಿಡರ್‌ನ ಸಾರದ್ನಾ ಹಾಗೂ ಬಾಂಗಾಡ್ ರೈಲು ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ.
ಈ ಘಟನೆ ಕುರಿತಂತೆ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಸರಕು ಸಾಗಾಟ ಕಾರಿಡರ್‌ನ ಅಧಿಕಾರಿ ತಿಳಿಸಿದ್ದಾರೆ.
ರೈಲು ಹಳಿಯಲ್ಲಿ ಪೆಟ್ರೋಲ್ ಬಾಟಲಿ ಹಾಗೂ ಬೆಂಕಿ ಪೆಟ್ಟಿಗೆಯೊಂದಿಗೆ ಎಲ್‌ಪಿಜಿ ಸಿಲಿಂಡರ್ ಇರಿಸುವ ಮೂಲಕ ಕಾನ್ಪುರದಲ್ಲಿ ಭಿವಾನಿ-ಪ್ರಯಾಗ್‌ರಾಜ್ ಕಾಳಿಂದಿ ಎಕ್ಸ್‌ಪ್ರೆಸ್ ರೈಲನ್ನು ಹಳಿ ತಪ್ಪಿಸುವ ಪ್ರಯತ್ನದ ದಿನದ ಬಳಿಕ ಈ ಘಟನೆ ವರದಿಯಾಗಿದೆ.