ಮ್ಯಾನ್ಮಾರ್ ನಲ್ಲಿ ಮತ್ತೊಂದು ಭೂಕಂಪ: ಸಾವಿನ ಸಂಖ್ಯೆ ಸಾವಿರ ದಾಟುವ ಅಂದಾಜು

PC: x.com/MarioNawfal
ಬ್ಯಾಂಕಾಕ್: ಭೀಕರ ಭೂಕಂಪದಿಂದ ತತ್ತರಿಸಿದ ಬೆನ್ನಲ್ಲೇ ಶುಕ್ರವಾರ ತಡರಾತ್ರಿ ಮ್ಯಾನ್ಮಾರ್ನಲ್ಲಿ 4.2 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ.
ಶುಕ್ರವಾರ ರಾತ್ರಿ 11.56ಕ್ಕೆ ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ಹೊಂದಿದ್ದ ಮತ್ತೊಂದು ಭೂಕಂಪ ಸಂಭವಿಸಿದೆ. ಥಾಯ್ಲೆಂಡ್ ಮತ್ತು ವಿಯೇಟ್ನಾಂ ಗಡಿಯ ಮಂಡಲೇ ಪ್ರದೇಶದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಈ ಕಂಪನ ಅನುಭವಕ್ಕೆ ಬಂದಿದೆ. ಬ್ಯಾಂಕಾಕ್ನಲ್ಲೂ ಭೂಕಂಪ ಸಂಭವಿಸಿ, ಜನ ಭೀತರಾಗಿ ಕಟ್ಟಡಗಳಿಂದ ಹೊರಬಂದರು. ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 144 ದಾಟಿದ್ದು, ಸಾವಿನ ಸಂಖ್ಯೆ 1000 ಮೀರುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ವಿಯೇಟ್ನಾಂನ ಹನೋಯ್ ಮತ್ತು ಹೋ ಚಿ ಮಿನ್ಹ್ ನಗರಗಳಲ್ಲಿ ಕಂಪನ ಅನುಭವಕ್ಕೆ ಬಂದಿದೆ. ಸುಮಾರು 10 ಕಿಲೋಮೀಟರ್ ಆಳದಲ್ಲಿ ಈ ಕಂಪನ ಸಂಭವಿಸಿದೆ ಎಂದು ಜರ್ಮನಿಯ ಜಿಎಫ್ಝೆಡ್ ಸೆಂಟರ್ ಫಾರ್ ಜಿಯೊಸೈನ್ಸಸ್ ಅಭಿಪ್ರಾಯಪಟ್ಟಿದೆ. ಇದರ ಕೇಂದ್ರ ಬಿಂದು ಕೇಂದ್ರ ಮ್ಯಾನ್ಮಾರ್ನ ಮೊನ್ವಾ ನಗರದಿಂದ ಪೂರ್ವಕ್ಕೆ 50 ಕಿಲೋಮೀಟರ್ ದೂರದಲ್ಲಿತ್ತು ಎಂದು ತಿಳಿದು ಬಂದಿದೆ.
ಮ್ಯಾನ್ಮಾರ್ ರಾಜಧಾನಿ ನೈಪಿಡೋನ 1000 ಹಾಸಿಗೆಗಳ ಆಸ್ಪತ್ರೆಯ ಹೊರಗೆ ಸಾಲು ಸಾಲು ಗಾಯಾಳುಗಳು ಬಿದಿದ್ದು, 7.7 ತೀವ್ರತೆಯ ಭೂಕಂಪದಿಂದ ಇಡೀ ದೇಶ ತತ್ತರಿಸಿದೆ. ಕಾರು ಮತ್ತು ಪಿಕಪ್ಗಳಲ್ಲಿ ಹಲವು ಮಂದಿ ಆಸ್ಪತ್ರೆಗೆ ಧಾವಿಸುತ್ತಿದ್ದರೆ, ಹಲವು ಮಂದಿಯನ್ನು ಸ್ಟ್ರೆಚರ್ಗಳಲ್ಲಿ ಕರೆ ತರಲಾಗುತ್ತಿದೆ. ಅವರ ದೇಹಗಳು ದೂಳಿನಿಂದ ಮುಚ್ಚಿದ್ದು ರಕ್ತಸಿಕ್ತವಾಗಿವೆ. ಇದು ಸಮೂಹ ಅಪಘಾತ ಎಂದು ಆಸ್ಪತ್ರೆ ಮೂಲಗಳು ಬಣ್ಣಿಸಿವೆ. ಭೂಕಂಪದಿಂದ ಆಸ್ಪತ್ರೆಯೇ ಭಾಗಶಃ ಹಾನಿಗೀಡಾಗಿದೆ. "ಹಲವು ಮಂದಿ ಗಾಯಾಳುಗಳು ಆಗಮಿಸುತ್ತಿದ್ದು, ಇಂಥ ಪರಿಸ್ಥಿತಿಯನ್ನು ಹಿಂದೆಂದೂ ನೋಡಿರಲಿಲ್ಲ" ಎಂದು ವೈದ್ಯರೊಬ್ಬರು ಬಣ್ಣಿಸಿದ್ದಾರೆ.
ಏತನ್ಮಧ್ಯೆ ಭಾರತ, ಜಪಾನ್, ಚೀನಾ, ಅಮೆರಿಕ ಸೇರಿದಂತೆ ದೇಶದ ವಿವಿಧೆಡೆಗಳಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಭಾರತ ತಕ್ಷಣಕ್ಕೆ 15 ಟನ್ ಪರಿಹಾರ ಸಾಮಗ್ರಿಗಳನ್ನು ಭಾರತೀಯ ಸೇನೆಯ ಸಿ-130ಜೆ ವಿಶೇಷ ವಿಮಾನದಲ್ಲಿ ಕಳುಹಿಸಿಕೊಟ್ಟಿದೆ.