ವಿಶ್ರಾಂತಿ ಪಡೆಯದೇ ಕೆಲಸ ಮಾಡಲು ವೇರ್‌ ಹೌಸ್‌ ಕಾರ್ಮಿಕರಿಗೆ ಅಮೆಝಾನ್‌ ನಿಂದ ಒತ್ತಡ : ಆರೋಪ

Update: 2024-06-15 11:52 GMT

Image posted on x by @Aiwalnd

ಹೊಸದಿಲ್ಲಿ,ಜೂ.15: ಹರ್ಯಾಣದ ಕೈಗಾರಿಕಾ ಕೇಂದ್ರ ಮನೇಸರ್‌ನಲ್ಲಿಯ ತನ್ನ ಗೋದಾಮುಗಳಲ್ಲಿ ಕಠಿಣ ದುಡಿಮೆ ಷರತ್ತುಗಳು ಮತ್ತು ಕಟ್ಟುನಿಟ್ಟಿನ ಉತ್ಪಾದನಾ ಗುರಿಗಳ ಬಗ್ಗೆ ಕೆಲಸಗಾರರಿಂದ ಆರೋಪಗಳ ಬಳಿಕ ಅಮೆಝಾನ್ ಇಂಡಿಯಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚಿಗೆ ಮಾಧ್ಯಮದೊಂದಿಗೆ ಮಾತನಾಡಿದ 24ರ ಹರೆಯದ ಕಾರ್ಮಿಕನೋರ್ವ, ಅಮೆಝಾನ್‌ನ ಗೋದಾಮುಗಳಲ್ಲಿಯ ಕಾರ್ಮಿಕರಿಗೆ ತಮ್ಮ ನಿರ್ದಿಷ್ಟ ಗುರಿಗಳನ್ನು ಪೂರೈಸುವವರೆಗೆ ನೀರು ಕುಡಿಯಲು ಅಥವಾ ಶೌಚಾಲಯಕ್ಕೆ ತೆರಳಲು ವಿರಾಮವನ್ನು ಪಡೆದುಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ಸೂಚಿಸುವುದು ವಾಡಿಕೆಯಾಗಿದೆ ಎನ್ನುವುದನ್ನು ಬಹಿರಂಗಗೊಳಿಸಿದ್ದಾನೆ. ಈ ಗುರಿಗಳು ಹೆಚ್ಚಾಗಿ ಬೃಹತ್ ಟ್ರಕ್‌ಗಳಿಂದ ಸರಕುಗಳನ್ನು ಇಳಿಸುವುದನ್ನು ಒಳಗೊಂಡಿರುತ್ತವೆ. ಇದು ದೈಹಿಕ ಶ್ರಮವನ್ನು ಬೇಡುವ ಕೆಲಸವಾಗಿದ್ದು,ಹಾಲಿ ಉಷ್ಣ ಮಾರುತದ ಹೊಡೆತದಿಂದ ತಾಪಮಾನ 50 ಡಿಗ್ರಿಗಳಷ್ಟು ಹೆಚ್ಚಿರುವಾಗ ಈ ಕಾರ್ಮಿಕರ ಕಷ್ಟ ಇನ್ನಷ್ಟು ಉಲ್ಬಣಗೊಂಡಿದೆ.

ವಾರಕ್ಕೆ ಐದು ದಿನಗಳ ಕಾಲ ಪ್ರತಿದಿನ 10 ಗಂಟೆಗಳ ಕಾಲ ದುಡಿದು ತಿಂಗಳಿಗೆ 10,088 ರೂ.ಗಳ ವೇತನವನ್ನು ಪಡೆಯುತ್ತಿರುವ ಈ ಕಾರ್ಮಿಕ,‘ವಿಶ್ರಾಂತಿಗೆ ಬಿಡುವು ಪಡೆಯದೆ ಕೆಲಸ ಮಾಡಲು ನಮ್ಮ ಮೇಲೆ ಒತ್ತಡವನ್ನು ಹೇರಲಾಗುತ್ತದೆ. ನಾವು ನಿರಂತರವಾಗಿ ಕೆಲಸ ಮಾಡಿದರೂ ದಿನಕ್ಕೆ ನಾಲ್ಕಕ್ಕಿಂತ ಹೆಚ್ಚಿನ ಟ್ರಕ್‌ಗಳನ್ನು ಖಾಲಿ ಮಾಡಲು ಹೆಣಗಾಡುತ್ತೇವೆ ’ ಎಂದು ತಿಳಿಸಿದ. ಇದು ಅಮೆಝಾನ್ ತನ್ನ ಕಾರ್ಮಿಕರಿಗೆ ವಿಧಿಸುವ ಗುರಿಗಳ ಅಪ್ರಾಯೋಗಿಕತೆಯನ್ನು ಸೂಚಿಸುತ್ತದೆ.

ಮಹಿಳಾ ಕಾರ್ಮಿಕರ ಸ್ಥಿತಿಯಂತೂ ಇನ್ನೂ ಭೀಕರವಾಗಿದೆ. ಸಾಕಷ್ಟು ಸೌಲಭ್ಯಗಳ ಕೊರತೆ ಮತ್ತು ಕೆಲಸದಲ್ಲಿ ದೈಹಿಕ ಶ್ರಮದಿಂದಾಗಿ ಅವರು ಹೆಚ್ಚುವರಿ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೆಲವು ವಿಭಾಗಗಳಲ್ಲಿ ನಿಗದಿತ ವಿಶ್ರಾಂತಿ ಕೊಠಡಿಗಳ ಸೌಲಭ್ಯವಿಲ್ಲ,ಹೀಗಾಗಿ ಅಸ್ವಚ್ಛ ಮತ್ತು ಅಸಮರ್ಪಕ ಜಾಗಗಳಲ್ಲಿ ಕೆಲ ಕಾಲ ವಿಶ್ರಾಂತಿ ಪಡೆಯುವುದು ಅವರಿಗೆ ಅನಿವಾರ್ಯವಾಗಿದೆ ಎಂದು ವರದಿಗಳು ತಿಳಿಸಿವೆ.

ಈ ಆರೋಪಗಳನ್ನು ತಿರಸ್ಕರಿಸಿರುವ ಅಮೆಝಾನ್ ಇಂಡಿಯಾ ವಕ್ತಾರರು,ಕಂಪನಿಯು ತನ್ನ ನೌಕರರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಎಲ್ಲ ಕ್ರಮಗಳನ್ನೂ ತೆಗೆದುಕೊಂಡಿದೆ. ಅವರಿಗೆ ಕುಡಿಯುವ ನೀರು,ವಿಶ್ರಾಂತಿ ಬಿಡುವು ಸೇರಿದಂತೆ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News