ಅಮೆರಿಕಾ ಚುನಾವಣೆ | ಉಪಾಧ್ಯಕ್ಷ ಅಭ್ಯರ್ಥಿ ಜೆಡಿ ವ್ಯಾನ್ಸ್ ಗೆ ಭಾರತದ ನಂಟು
ಅಮೆರಿಕಾ ಚುನಾವಣೆಯಲ್ಲಿ ಮತ್ತೊಮ್ಮೆ ಭಾರತೀಯ ನಂಟು ದೊಡ್ಡ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಕಳೆದ ಬಾರಿ ಕಮಲಾ ಹ್ಯಾರಿಸ್ ಭಾರತೀಯ ಮೂಲದವರಾಗಿ ಅಮೆರಿಕಾ ಚುನಾವಣೆಯಲ್ಲಿ ಗಮನ ಸೆಳೆದಿದ್ದರು.
ಪ್ರಸ್ತುತ ಅಮೆರಿಕಾ ಉಪಾಧ್ಯಕ್ಷೆಯಾಗಿರುವ ಅವರು, ಅಮೆರಿಕಾದ ಇತಿಹಾಸದಲ್ಲಿಯೇ ಮೊದಲ ಮಹಿಳಾ ಉಪಾಧ್ಯಕ್ಷರೆಂಬ ಹೆಗ್ಗಳಿಕೆಗೂ ಪಾತ್ರರಾದವರು. ಡೆಮಾಕ್ರಟಿಕ್ ಪಕ್ಷದವರಾದ ಕಮಲಾ ಹ್ಯಾರಿಸ್ ಈ ಬಾರಿ ಬೈಡನ್ ಕಣದಿಂದ ಹಿಂದೆ ಸರಿದರೆ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಟ್ರಂಪ್ ಗೆ ಎದುರಾಳಿಯಾದರೂ ಅಚ್ಚರಿಯಿಲ್ಲ.
ಹೀಗಿರುವಾಗಲೇ ಮತ್ತೂ ಒಬ್ಬ ಭಾರತೀಯ ಮೂಲದ ಮಹಿಳೆಯ ನಂಟು ಈಗ ಅಮೆರಿಕಾ ಚುನಾವಣೆಯಲ್ಲಿ ಸದ್ದು ಮಾಡುತ್ತಿದೆ. ಅವರೇ ಉಷಾ ಚಿಲುಕುರಿ.
ರಿಪಬ್ಲಿಕನ್ ಪಕ್ಷದಿಂದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಓಹಿಯೋ ಸೆನೆಟರ್ ಜೆಡಿ ವ್ಯಾನ್ಸ್ ಅವರ ಪತ್ನಿ ಉಷಾ ಚಿಲುಕುರಿ. ವ್ಯಾನ್ಸ್ ಹೆಸರನ್ನು ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಪ್ರಕಟಿಸಿದ ಬಳಿಕ, ಅವರ ಬದುಕಿನಲ್ಲಿನ ಭಾರತೀಯ ನಂಟಿನ ವಿಚಾರ ಗಮನ ಸೆಳೆಯುತ್ತಿದೆ.
ಟ್ರಂಪ್ ಅಧಕ್ಷರಾಗಿದ್ದಾಗ ಅವರ ಕಟು ಟೀಕಾಕಾರರಾಗಿದ್ದ ವ್ಯಾನ್ಸ್, ಆ ಬಳಿಕ ಟ್ರಂಪ್ಗೆ ಅಷ್ಟೇ ಆಪ್ತರಾದದ್ದು ವಿಶೇಷ. ಅದರ ಮುಂದುವರಿಕೆಯಾಗಿ ಟ್ರಂಪ್ ಈಗ ಅವರನ್ನೇ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ.
ಈಗ ಗಮನ ಸೆಳೆಯುತ್ತಿರುವುದು ವ್ಯಾನ್ಸ್ ಅವರ ಪತ್ನಿ ಉಷಾ ಚಿಲುಕುರಿ. ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳಲ್ಲಿ ಗಾಢ ನಂಬಿಕೆಯಿರುವ ಉಷಾ, ವ್ಯಾನ್ಸ್ ಜೊತೆಗಾರ್ತಿಯಾಗಿ ಅವರ ನಂಬಿಕೆಗೂ ದೊಡ್ಡ ಬೆಂಬಲ ನೀಡುತ್ತಿರುವುದು ವಿಶೇಷ.
ಉಷಾ ಚಿಲ್ಕುರಿ ಅವರ ಪೋಷಕರು ಮೂಲತಃ ಭಾರತದಿಂದ ಅಮೆರಿಕಾಗೆ ವಲಸೆ ಹೋಗಿ ನೆಲೆಸಿದವರು. ಭಾರತೀಯ ಮೂಲದವರಾಗಿರುವ ಉಷಾ ಶೈಕ್ಷಣಿಕ ಹಿನ್ನೆಲೆ ಕೂಡ ದೊಡ್ಡದು.
ಯೇಲ್ ಮತ್ತು ಕೇಂಬ್ರಿಡ್ಜ್ ವಿವಿಗಳಿಂದ ಇತಿಹಾಸ ಮತ್ತು ಫಿಲಾಸಫಿಯಲ್ಲಿ ಪದವಿ ಪಡೆದಿದ್ದಾರೆ. ಯೇಲ್ ಜರ್ನಲ್ನ ಮ್ಯಾನೇಜಿಂಗ್ ಎಡಿಟರ್ ಆಗಿಯೂ ಅವರ ಪಾತ್ರ ದೊಡ್ಡದು. ಯೇಲ್ ಲಾ ಜರ್ನಲ್ನ ಎಕ್ಸಿಕ್ಯೂಟಿವ್ ಡೆವಲಪ್ಮೆಂಟ್ ಎಡಿಟರ್ ಆಗಿಯೂ ಕೆಲಸ ಮಾಡಿದ್ದಾರೆ.
ಕಾನೂನು ಕ್ಷೇತ್ರದಲ್ಲಿ ಅವರಿಗೆ ದೊಡ್ಡ ಹೆಸರಿದೆ. 2014ರಲ್ಲಿ ಉಷಾ ಡೆಮಾಕ್ರಟಿಕ್ ಪಕ್ಷದ ಸದಸ್ಯೆಯಾದರು. 39 ವರ್ಷದ ಜೆಡಿ ವ್ಯಾನ್ಸ್ ಓಹಿಯೋ ಸ್ಟೇಟ್ ಯೂನಿವರ್ಸಿಟಿ ಮತ್ತು ಯೇಲ್ ಲಾ ಸ್ಕೂಲ್‌ನಲ್ಲಿ ಅಧ್ಯಯನ ಮಾಡಿದವರು.
ಉಷಾ ಮತ್ತು ವ್ಯಾನ್ಸ್ ಮೊದಲು ಭೇಟಿಯಾದದ್ದು ಯೇಲ್ ಲಾ ಸ್ಕೂಲ್ನಲ್ಲಿ. ಇಬ್ಬರ ನಡುವೆ ಪ್ರೇಮಾಂಕುರವಾಯಿತು. 2014ರಲ್ಲಿ ಮದುವೆಯಾದರು. ಬೇರೆ ಬೇರೆ ಮತದವರಾದ ಕಾರಣ, ಹಿಂದೂ ಸಂಪ್ರದಾಯದ ಪ್ರತ್ಯೇಕ ಶಾಸ್ತ್ರಗಳನ್ನೂ ಮದುವೆಯ ವೇಳೆ ನಡೆಸಲಾಗಿತ್ತು.
ಉಷಾ ಅವರ ಜೀವನಶೈಲಿಯಿಂದ ವ್ಯಾನ್ಸ್ ಸಾಕಷ್ಟನ್ನು ಕಲಿತಿದ್ದಾರೆ. ಉಷಾ ಮತ್ತು ವ್ಯಾನ್ಸ್ ದಂಪತಿಗೆ ಐವಾನ್, ವಿವೇಕ್ ಮತ್ತು ಮಿರಾಬೆಲ್ ಎಂಬ ಮೂವರು ಮಕ್ಕಳಿದ್ದಾರೆ.
ಹಲವು ವಿಚಾರಗಳಲ್ಲಿ ವ್ಯಾನ್ಸ್ ದೃಷ್ಟಿಕೋನವನ್ನು ರೂಪಿಸುವಲ್ಲಿ ಪತ್ನಿಯಾಗಿ, ಸ್ನೇಹಿತೆಯಾಗಿ ಉಷಾ ವಹಿಸಿರುವ ಪಾತ್ರವೂ ಅಷ್ಟೇ ದೊಡ್ಡದು. ತಮ್ಮ ಪತ್ನಿಯ ಹಿಂದೂ ನಂಬಿಕೆಗಳು ತನ್ನ ವೈಯಕ್ತಿಕ ಹಾಗೂ ವೃತ್ತಿ ಬದುಕಿನ ಸವಾಲುಗಳನ್ನು ಎದುರಿಸಲು ಸಹಾಯ ಮಾಡಿದವೆಂಬುದನ್ನು ಜೆಡಿ ವಾನ್ಸ್ ಕೂಡ ಹೇಳಿಕೊಂಡಿದ್ದಾರೆ.
ಉಷಾ ಅವರ ಕಾನೂನು ತಿಳುವಳಿಕೆ ಮತ್ತು ಸಾಂಸ್ಕೃತಿಕ ಹಿನ್ನೆಲೆ ಗಮನ ಸೆಳೆಯುತ್ತಿದೆ. ಪತಿಗೆ ಸದಾ ಮೊದಲ ಬೆಂಬಲಿಗರಾಗಿ, ಸ್ಫೂರ್ತಿಯಾಗಿ ನಿಂತಿರುವವರು ಉಷಾ. ಉಷಾ ಚಿಲುಕುರಿ ವಾನ್ಸ್ ಯಾವಾಗಲೂ ಹಿನ್ನೆಲೆಯಲ್ಲಿದ್ದು ಪತಿಯನ್ನು ಬೆಂಬಲಿಸುವವರು. ಉಷಾ ಅವರು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ.
ಅಮೆರಿಕಾ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ಜಿ ರಾಬರ್ಟ್ಸ್ ಜೂನಿಯರ್ ಮತ್ತು ನ್ಯಾಯಾಧೀಶ ಬ್ರೆಟ್ ಕವನಾಗ್ ಮತ್ತು ನ್ಯಾಯಾಧೀಶ ಅಮುಲ್ ಥಾಪರ್ ಅವರ ಬಳಿಯೂ ಕೆಲಸ ಮಾಡಿದ್ದಾರೆ.
ಈಗ ಉಪಾಧ್ಯಕ್ಷ ಅಭಯರ್ಥಿಯಾಗಿರುವ ಪತಿಗೆ ಅಲ್ಲಿಯೂ ಕಾನೂನು ಇತ್ಯಾದಿ ವಿಚಾರಗಳಲ್ಲಿ ಬೆಂಬಲಕ್ಕೆ ಉಷಾ ಅವರೇ ನಿಂತಿದ್ದಾರೆ. ರಾಜಕೀಯದ ನಡುವೆಯೂ, ಇಬ್ಬರ ನಡುವಿನ ಅಪರೂಪದ ಮತ್ತು ಅನುರೂಪ ದಾಂಪತ್ಯ ಕೂಡ ಸುದ್ದಿಯಾಗುತ್ತಿದೆ.