ಈ ವರ್ಷ ಸುಮಾರು 4,300 ಭಾರತೀಯ ಮಿಲಿಯಾಧೀಶರು ವಲಸೆ ಹೋಗುವ ನಿರೀಕ್ಷೆ, ಹೆಚ್ಚಿನವರು ಯುಎಇಗೆ: ವರದಿ

Update: 2024-06-20 12:17 GMT

ಸಾಂದರ್ಭಿಕ ಚಿತ್ರ | PC : NDTV

ಹೊಸದಿಲ್ಲಿ: ಈ ವರ್ಷ ಸುಮಾರು 4,300 ಮಿಲಿಯಾಧೀಶರು ಭಾರತದಿಂದ ವಲಸೆ ಹೋಗುವ ನಿರೀಕ್ಷೆಯಿದ್ದು,ಅವರಲ್ಲಿ ಹೆಚ್ಚಿನವರು ಸಂಯುಕ್ತ ಅರಬ್ ಗಣರಾಜ್ಯ (ಯುಎಎಇ)ದಲ್ಲಿ ನೆಲೆಸಲು ಬಯಸಿದ್ದಾರೆ ಎಂದು ಅಂತರರಾಷ್ಟ್ರೀಯ ಹೂಡಿಕೆ ವಲಸೆ ಸಲಹಾ ಸಂಸ್ಥೆ ಹೆನ್ಲಿ ಆ್ಯಂಡ್ ಪಾರ್ಟನರ್ಸ್ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.

ಭಾರತವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು,ಇದೇ ವೇಳೆ ಮಿಲಿಯಾಧೀಶರ ವಲಸೆ ವಿಷಯದಲ್ಲಿ ಚೀನಾ ಮತ್ತು ಬ್ರಿಟನ್ ಬಳಿಕ ಜಾಗತಿಕವಾಗಿ ಮೂರನೇ ಸ್ಥಾನವನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.

ಈಗ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಹೆಚ್ಚಿನ ದೇಶವಾಗಿರುವ ಭಾರತದಿಂದ ವಲಸೆ ಹೋಗುತ್ತಿರುವ ಮಿಲಿಯಾಧೀಶರ ಸಂಖ್ಯೆ ಚೀನಾಕ್ಕೆ ಹೋಲಿಸಿದರೆ ಶೇ.30ಕ್ಕಿಂತ ಕಡಿಮೆಯಿದೆ.

5,100 ಮಿಲಿಯಾಧೀಶರು ಭಾರತವನ್ನು ತೊರೆದು ವಿದೇಶಗಳಿಗೆ ವಲಸೆ ಹೋಗಿದ್ದನ್ನು ಕಳೆದ ವರ್ಷ ಇದೇ ವರದಿಯು ಎತ್ತಿ ತೋರಿಸಿತ್ತು.

ಭಾರತವು ಪ್ರತಿ ವರ್ಷ ಸಾವಿರಾರು ಮಿಲಿಯಾಧೀಶರನ್ನು ಕಳೆದುಕೊಳ್ಳುತ್ತಿದ್ದು, ಹೆಚ್ಚಿನವರು ಯುಎಇಗೆ ವಲಸೆ ಹೋಗುತ್ತಾರೆ. ಇದೇ ವೇಳೆ ಕಳೆದ ದಶಕದಲ್ಲಿ ಶೇ.85ರಷ್ಟು ಸಂಪತ್ತಿನ ಬೆಳವಣಿಗೆಯಾಗಿರುವುದು ವಲಸೆ ಕುರಿತು ಕಳವಳಗಳನ್ನು ಶಮನಿಸಬಹುದು,ದೇಶವು ಹೆಚ್ಚಿನ ನಿವ್ವಳ ಸಂಪತ್ತು ಹೊಂದಿರುವ ಶ್ರೀಮಂತರನ್ನು ಸೃಷ್ಟಿಸುವುದನ್ನು ಮುಂದುವರಿಸಿದ್ದು, ಇಂತಹವರ ಸಂಖ್ಯೆ ವಲಸೆ ಹೋಗುವವರಿಗಿಂತ ಹೆಚ್ಚೇ ಇದೆ.

ಯುಎಇಗೆ ಭಾರತೀಯ ಮಿಲಿಯಾಧೀಶರ ವಲಸೆಯ ಹಿನ್ನೆಲೆಯಲ್ಲಿ ಇತ್ತೀಚಿನ ಸಮಯದಲ್ಲಿ ಹಲವಾರು ಭಾರತೀಯ ಖಾಸಗಿ ಬ್ಯಾಂಕುಗಳು ಆ ದೇಶದಲ್ಲಿ ತಮ್ಮ ಚಟುವಟಿಕೆಗಳನ್ನು ವಿಸ್ತರಿಸುತ್ತಿವೆ. ಭಾರತೀಯ ಕುಟುಂಬಗಳಿಗೆ ಸಂಪತ್ತು ನಿರ್ವಹಣೆ ಸೇವೆಗಳನ್ನು ಒದಗಿಸುತ್ತಿರುವ ಕೆಲವು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಕೋಟಕ್ ಮಹಿಂದ್ರಾ ಬ್ಯಾಂಕ್ ಮತ್ತು ʼ360 ಒನ್ ವೆಲ್ತ್ʼ ಸೇರಿವೆ.

ಮಿಲಿಯಾಧೀಶರ ವಲಸೆಯು ದೇಶವೊಂದರ ವಿದೇಶಿ ವಿನಿಮಯ ಮೀಸಲಿನ ಮೇಲೆ ಗಮನಾರ್ಹ ಪರಿಣಾಮವನ್ನು ಹೊಂದಿರುವ ವಿದ್ಯಮಾನವಾಗಿದೆ,ಏಕೆಂದರೆ ಈ ಮಿಲಿಯಾಧೀಶರು ಇನ್ನೊಂದು ದೇಶಕ್ಕೆ ವಲಸೆ ಹೋಗುವಾಗ ತಮ್ಮ ಆಸ್ತಿಗಳ ಗಣನೀಯ ಭಾಗವನ್ನೂ ಸಾಗಿಸುತ್ತಾರೆ.

ತಮ್ಮ ತಾಯ್ನಾಡಿನಿಂದ ಮಿಲಿಯಾಧೀಶರ ವಲಸೆಗೆ ಮುಖ್ಯ ಕಾರಣಗಳಲ್ಲಿ ತೆರಿಗೆ ಲಾಭಗಳು,ಸುರಕ್ಷತೆ ಮತ್ತು ಆರ್ಥಿಕ ಪರಿಗಣನೆಗಳು,ಉದ್ಯಮಾವಕಾಶಗಳು ಮತ್ತು ಉತ್ತಮ ಜೀವನಶೈಲಿ ಇತ್ಯಾದಿಗಳು ಸೇರಿವೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News