370ನೇ ವಿಧಿ: ನಾಳೆ ಸುಪ್ರೀಂ ತೀರ್ಪು
ಹೊಸದಿಲ್ಲಿ: ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು 2019ರಲ್ಲಿ ರದ್ದುಪಡಿಸಿದ ಕೇಂದ್ರ ಸರಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಮೇಲಿನ ತನ್ನ ತೀರ್ಪನ್ನು ಸುಪ್ರೀಂಕೋರ್ಟ್ ಸೋಮವಾರ ಪ್ರಕಟಿಸಲಿದೆ. ಅರ್ಜಿದಾರರು ಹಾಗೂ ಕೇಂದ್ರ ಸರಕಾರದ ವಾದ ಪ್ರತಿವಾದಗಳ ಆಲಿಕೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ ಹಾಗೂ ಸೆಪ್ಟೆಂಬರ್ನಲ್ಲಿ ನಡೆಸಿತ್ತು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ಸದಸ್ಯರ ನ್ಯಾಯಪೀಠವು ತೀರ್ಪು ಪ್ರಕಟಿಸಲಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ಕೌಲ್, ಸಂಜೀವ್ ಖನ್ನಾ, ಬಿ.ಆರ್.ಗವಾಯಿ ಹಾಗೂ ಸೂರ್ಯಕಾಂತ್ ನ್ಯಾಯಪೀಠದ ಇತರ ಸದಸ್ಯರು.
ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಲು ಆಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜಾರಿಗೊಳಿಸಿದ್ದ ಸಾಂವಿಧಾನಿಕ ಆದೇಶ 272 ಹಾಗೂ 273 ಅನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಲು ರಾಷ್ಟ್ರಪತಿಯವರಿಗೆ ಅಧಿಕಾರವಿಲ್ಲವೆಂದು ಅವರು ವಾದಿಸಿದ್ದರು.
ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಲು ಕೇಂದ್ರ ಸರಕಾರವು 2019ರ ಆಗಸ್ಟ್ 5ರಂದು ರದ್ದುಪಡಿಸಿತ್ತು.