ಹೋರಾಟ, ಶಿಕ್ಷಣ ಕ್ರಾಂತಿಯಿಂದ ಮುಖ್ಯಮಂತ್ರಿ ಹುದ್ದೆವರೆಗೆ: ದಿಲ್ಲಿ ನೂತನ ಸಿಎಂ ಅತಿಶಿ ಸಿಂಗ್ ಯಾರು?

Update: 2024-09-17 08:05 GMT

ಅತಿಶಿ ಮರ್ಲೆನಾ ಸಿಂಗ್ (Photo: Facebook)

ಹೊಸದಿಲ್ಲಿ: ಆಪ್ ಶಾಸಕಿ ಅತಿಶಿ ಮರ್ಲೆನಾ ಸಿಂಗ್ ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ AAP ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಜ್ರಿವಾಲ್ ಅವರ ಉತ್ತರಾಧಿಕಾರಿಯಾಗಿ ಅತಿಶಿ ಅವರನ್ನು ನೇಮಕ ಮಾಡಲಾಗಿದೆ.

ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್ ಬಳಿಕ ದಿಲ್ಲಿಯ ಮುಖ್ಯಮಂತ್ರಿಯಾಗಿ ಅತಿಶಿ ಆಯ್ಕೆಯಾಗಿದ್ದು, ಅವರು ದಿಲ್ಲಿಯ ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ.

ಅತಿಶಿ ಮರ್ಲೆನಾ ಯಾರು?

ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಅಬಕಾರಿ ನೀತಿ ಪ್ರಕರಣದಲ್ಲಿ ಜೈಲು ಪಾಲಾದ ಬಳಿಕ ಶಾಸಕಿ ಅತಿಶಿ ಸಿಂಗ್ ಅವರು ಎಎಪಿಯ ಮುಂಚೂಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

2015-2018ರವರೆಗೆ ಮನಿಶ್ ಸಿಸೋಡಿಯಾಗೆ ಸಲಹೆಗಾರರಾಗಿ ಕೆಲಸ ಮಾಡಿದ್ದ ಅತಿಶಿ ಅವರನ್ನು 2023ರಲ್ಲಿ ದಿಲ್ಲಿ ಸರ್ಕಾರದಲ್ಲಿ ಶಿಕ್ಷಣ, ಪಿಡಬ್ಸ್ಯೂಡಿ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾಗಿ ನೇಮಕ ಮಾಡಲಾಗಿತ್ತು.

1981ರ ಜೂ.8ರಂದು ವಿಜಯ್ ಸಿಂಗ್ ಮತ್ತು ತ್ರಿಪ್ತಾ ದಂಪತಿಯ ಪುತ್ರಿಯಾಗಿ ಜನಿಸಿದ್ದ ಅತಿಶಿ ಅವರ ಪೂರ್ಣ ಹೆಸರು ಅತಿಶಿ ಮರ್ಲೆನಾ ಸಿಂಗ್. ಅವರ ತಂದೆ- ತಾಯಿ ಇಬ್ಬರೂ ಪ್ರಾಧ್ಯಾಪಕರಾಗಿದ್ದರು. ಆದರೆ ಅವರು 2018ರಿಂದ ರಾಜಕೀಯದಲ್ಲಿ ಸಕ್ರಿಯವಾಗುತ್ತಿದ್ದಂತೆ ತಮ್ಮ ಹೆಸರನ್ನು ಹೆಚ್ಚಾಗಿ ಅತಿಶಿ ಎಂದೇ ಉಲ್ಲೇಖಿಸುತ್ತಿದ್ದರು.

ಅತಿಶಿ ಪ್ರೌಢಶಾಲಾ ಶಿಕ್ಷಣವನ್ನು ಹೊಸದಿಲ್ಲಿಯ ಸ್ಪ್ರಿಂಗ್ಡೇಲ್ಸ್ ಶಾಲೆಯಲ್ಲಿ ಪೂರ್ಣಗೊಳಿಸಿದ್ದು, ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿಯನ್ನು ಪಡೆದುಕೊಂಡಿದ್ದರು. ಆಕ್ಸ್ಫರ್ಡ್ ವಿವಿಯ ಹಳೆ ವಿದ್ಯಾರ್ಥಿನಿಯಾಗಿರುವ ಅತಿಶಿ, ವಿಶ್ವದ ಪ್ರತಿಷ್ಠಿತ ವಿವಿಯಲ್ಲಿ 2003ರಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದರು.

2013 ರಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದ ಅತಿಶಿ ಎಎಪಿ ಪಕ್ಷದ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅತಿಶಿ 2015 ರಲ್ಲಿ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದ್ದ ಐತಿಹಾಸಿಕ ಜಲ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು ಮತ್ತು ನಂತರದ ಪ್ರತಿಭಟನೆಗಳು ಮತ್ತು ಕಾನೂನು ಹೋರಾಟದಲ್ಲಿ ಎಎಪಿ ನಾಯಕ ಅಲೋಕ್ ಅಗರ್ವಾಲ್ ಅವರಿಗೆ ಬೆಂಬಲವನ್ನು ನೀಡಿದ್ದರು.

2019ರಲ್ಲಿ ಪೂರ್ವ ದಿಲ್ಲಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಗೌತಮ್ ಗಂಭೀರ್ ವಿರುದ್ಧ ಎಎಪಿ ಅತಿಶಿ ಅವರನ್ನು ಕಣಕ್ಕಿಳಿಸಿತ್ತು. ಆದರೆ ಅತಿಶಿ 4.5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲನ್ನು ಕಂಡಿದ್ದರು.

2020ರಲ್ಲಿ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅತಿಶಿ ಅವರಿಗೆ ದಕ್ಷಿಣ ದೆಹಲಿಯ ಕಲ್ಕಾಜಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಅವರು ಬಿಜೆಪಿಯ ಧರಂಬೀರ್ ಸಿಂಗ್ ಅವರನ್ನು 11,000 ಮತಗಳಿಂದ ಸೋಲಿಸಿದ್ದರು.

ದಿಲ್ಲಿಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹವಾದ ಬದಲಾವಣೆ ತಂದಿರುವ ಖ್ಯಾತಿಯು ಅತಿಶಿಯದ್ದಾಗಿದೆ. ದಿಲ್ಲಿ ಸರ್ಕಾರಿ ಶಾಲೆಗಳ ಮೂಲಸೌಕರ್ಯವನ್ನು ಸುಧಾರಿಸುವಲ್ಲಿ, ಶಿಕ್ಷಣ ಹಕ್ಕು ಕಾಯ್ದೆಗೆ ಅನುಗುಣವಾಗಿ ಶಾಲಾ ನಿರ್ವಹಣಾ ಸಮಿತಿಗಳನ್ನು ಸ್ಥಾಪಿಸುವಲ್ಲಿ ಮತ್ತು ಖಾಸಗಿ ಶಾಲೆಗಳ ಅನಿಯಂತ್ರಿತ ಶುಲ್ಕ ಹೆಚ್ಚಳವನ್ನು ತಡೆಯಲು ನಿಯಮಗಳನ್ನು ಬಲಪಡಿಸುವಲ್ಲಿ ಅತಿಶಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅವರ ಪಾತ್ರಗಳ ಬಗ್ಗೆ ಮಾಧ್ಯಮಗಳು ಕೂಡ ವರದಿಯನ್ನು ಮಾಡಿತ್ತು.

ಅತಿಶಿ ಶಿಕ್ಷಣದಲ್ಲಿ ನವೀನ ಪಠ್ಯಕ್ರಮವನ್ನು ಪರಿಚಯಿಸಿದರು, ಇದು ವಿದ್ಯಾರ್ಥಿಗಳ ಒಟ್ಟಾರೆ ಯೋಗಕ್ಷೇಮ ಮತ್ತು ಭಾವನಾತ್ಮಕ ಬೆಳವಣಿಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿತ್ತು.

ದಿಲ್ಲಿ ಸರ್ಕಾರದಲ್ಲಿ ಶಿಕ್ಷಣ ಮತ್ತು ಲೋಕೋಪಯೋಗಿ ಇಲಾಖೆಯಂತಹ ಪ್ರಮುಖ ಖಾತೆಗಳನ್ನು ಹೊಂದಿದ್ದ ಅತಿಶಿ ಕೇಜ್ರಿವಾಲ್ ಮತ್ತು ಸಿಸೋಡಿಯಾ ಜೈಲಿನಲ್ಲಿದ್ದಾಗ ಪಕ್ಷದ ಕಾರ್ಯಕ್ರಮಗಳು ಮತ್ತು ಮಾಧ್ಯಮ ಸಂವಾದದಲ್ಲಿ ಪಕ್ಷದ ನಿಲುವನ್ನು ಸ್ಪಷ್ಪಡಿಸುವ ಮೂಲಕ ಬಿಜೆಪಿ ಹಾಗೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News