70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ ಭಾರತ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ತನ್ನ ಸರಕಾರದ ಮುಂಚೂಣಿ ಆರೋಗ್ಯ ವಿಮೆ ಕಾರ್ಯಕ್ರಮ ಆಯುಷ್ಮಾನ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಮಂಗಳವಾರ 70 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗಾಗಿ ವಿಸ್ತರಿಸಿದರು.
ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,70 ವರ್ಷ ಮೇಲ್ಪಟ್ಟವರು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ‘ಆಯುಷ್ಮಾನ ವಯ ವಂದನಾ ’ಕಾರ್ಡ್‌ನ್ನು ಹೊಂದಿರುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಆದರೆ ದಿಲ್ಲಿ ಮತ್ತು ಪಶ್ಚಿಮ ಬಂಗಾಳ ಗಳಲ್ಲಿಯ 70 ವರ್ಷ ಮೇಲ್ಪಟ್ಟವರು ಈ ಯೋಜನೆಯ ಲಾಭಗಳನ್ನು ಪಡೆಯಲು ಸಾಧ್ಯವಿಲ್ಲ,ಏಕೆಂದರೆ ಅವರ ಸರಕಾರಗಳು ‘ರಾಜಕೀಯ ಕಾರಣಗಳಿಂದಾಗಿ’ ಅದನ್ನು ಜಾರಿಗೊಳಿಸುತ್ತಿಲ್ಲ ಎಂದು ಮೋದಿ ಹೇಳಿದರು.
ಈ ರಾಷ್ಟ್ರೀಯ ಆರೋಗ್ಯ ವಿಮೆ ಯೋಜನೆಯು ಆಸ್ಪತ್ರೆ ವೆಚ್ಚಗಳಿಗಾಗಿ ವಾರ್ಷಿಕ ಐದು ಲಕ್ಷ ರೂ.ಗಳ ನೆರವನ್ನು ಒದಗಿಸುತ್ತದೆ,ಆದರೆ ವಿಷಾದನೀಯವಾಗಿ ನಿಮ್ಮ ರಾಜ್ಯಗಳಲ್ಲಿ ರಾಜಕೀಯ ಹಿತಾಸಕ್ತಿಗಳು ಈ ಯೋಜನೆಯ ಅನುಷ್ಠಾನಕ್ಕೆ ಅಡ್ಡಿಯನ್ನುಂಟು ಮಾಡಿವೆ ಎಂದು ದಿಲ್ಲಿ ಮತ್ತು ಪ.ಬಂಗಾಳದ ಜನತೆಯನ್ನು ಪ್ರಸ್ತಾವಿಸಿ ಮೋದಿ ಹೇಳಿದರು.
ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿಯವರು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸುಮಾರು 12,850 ಕೋ.ರೂ. ವೆಚ್ಚದ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದರು,ಉದ್ಘಾಟಿಸಿದರು ಮತ್ತು ಶಿಲಾನ್ಯಾಸ ನೆರವೇರಿಸಿದರು.