ಖರೀದಿ ಭೀತಿ: ಹೈದರಾಬಾದ್ ರೆಸಾರ್ಟ್ ಗೆ ಸ್ಥಳಾಂತರಗೊಂಡ ಬಿಹಾರ ಕಾಂಗ್ರೆಸ್ ಶಾಸಕರು

Update: 2024-02-05 02:38 GMT

Photo: ANI

ಪಾಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ ಡಿಎ ಸರ್ಕಾರ ಈ ತಿಂಗಳ 12ರಂದು ವಿಶ್ವಾಸಮತ ಯಾಚಿಸುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ 19 ಮಂದಿ ಶಾಸಕರ ಪೈಕಿ 16 ಮಂದಿಯನ್ನು ಹೈದರಾಬಾದ್ ರೆಸಾರ್ಟ್ ಗೆ ಸ್ಥಳಾಂತರಿಸಿದೆ. ಕೆಲ ಶಾಸಕರು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಜತೆ ಸಂಪರ್ಕದಲ್ಲಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆಡಳಿತದ ತೆಲಂಗಾಣಕ್ಕೆ ತನ್ನ ಶಾಸಕರನ್ನು ಕರೆದೊಯ್ಯಲು ನಿರ್ಧರಿಸಿದೆ. ಉಳಿದ ಮೂವರು ಶಾಸಕರು ಸೋಮವಾರ ಹೈದರಾಬಾದ್ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

"ವಿವಿಧ ಕಾರಣಗಳಿಗಾಗಿ ನಮ್ಮ ಬಿಹಾರ ಶಾಸಕರನ್ನು ಸ್ಥಳಾಂತರಿಸಲಾಗಿದೆ" ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ. ಫೆಬ್ರವರಿ 12ರಂದು ಪಾಟ್ನಾಗೆ ವಾಪಸ್ಸಾಗಲಿರುವ ಈ ಶಾಸಕರು ವಿಮಾನ ನಿಲ್ದಾಣದಿಂದ ನೇರವಾಗಿ ವಿಶ್ವಾಸಮತ ಯಾಚನೆ ನಡೆಯುವ ಸದನಕ್ಕೆ ಹಾಜರಾಗಲಿದ್ದಾರೆ ಎಂದು ಮೂಲಗಳು ವಿವರಿಸಿವೆ.

ಕಾಂಗ್ರೆಸ್-ಆರ್ ಜೆಡಿ ಮತ್ತು ಎಡಪಕ್ಷಗಳನ್ನು ಒಳಗೊಂಡ ಮಹಾಮೈತ್ರಿಕೂಟವನ್ನು ತೊರೆದು ಜನವರಿ 28ರಂದು ಎನ್ ಡಿಎ ಕೂಟಕ್ಕೆ ನಿಷ್ಠಾಂತರ ಮಾಡಿರುವ ನಿತೀಶ್ 128 ಶಾಸಕರ ಬೆಂಬಲ ಇದೆ ಎಂದು ಹೇಳಿಕೊಂಡಿದ್ದಾರೆ. 243 ಸದಸ್ಯರ ಸದನದಲ್ಲಿ ಬಹುಮತಕ್ಕೆ 122 ಶಾಸಕರ ಅಗತ್ಯವಿದೆ. ಆದರೆ ಕೆಲವರು ಸದನ ಪರೀಕ್ಷೆಯ ವೇಳೆ ಗೈರುಹಾಜರಾಗಲಿದ್ದಾರೆ ಅಥವಾ 'ಪಕ್ಷಾಂತರ' ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಬಿಹಾರದ ಕಾಂಗ್ರೆಸ್ ಅಧ್ಯಕ್ಷ ಅಖಿಲೇಶ್ ಸಿಂಗ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ಮುಖಂಡರು ಹೈದರಾಬಾದ್ ಗೆ ತೆರಳಿದ ನಿಯೋಗದ ನೇತೃತ್ವ ವಹಿಸಿದ್ದಾರೆ. ಈ ಶಾಸಕರು ದೆಹಲಿಯಿಂದ ತೆಲಂಗಾಣಕ್ಕೆ ತೆರಳಿದ್ದು, ಅಲ್ಲಿ ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆಯವರನ್ನು ಶನಿವಾರ ಭೇಟಿ ಮಾಡಿ ಬಳಿಕ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News