ಬಿಜೆಪಿಯ ಪರಾಗ್ ಶಾ ಮಹಾರಾಷ್ಟ್ರದ ಅತೀ ಶ್ರೀಮಂತ ಅಭ್ಯರ್ಥಿ
ಮುಂಬೈ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸುಮಾರು 8 ಸಾವಿರ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ. ಇವರ ಪೈಕಿ ಮುಂಬೈನ ಘಾಟ್‌ಕೋಪರ್ (ಪೂರ್ವ) ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕಪರಾಗ್ ಶಾ ಅವರು ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದು, ಪ್ರಸಕ್ತ 3383.06 ಕೋಟಿ ರೂ. ಸಂಪತ್ತನ್ನು ಹೊಂದಿದ್ದಾರೆ.
ಪರಾಗ್ ಶಾ ಅವರ ಆಸ್ತಿಯ ಪ್ರಮಾಣವು ಕಳೆದ ಐದು ವರ್ಷಗಳಲ್ಲಿ ಶೇ.575ರಷ್ಟು ಹೆಚ್ಚಳವಾಗಿದೆ. 2019ರ ವಿಧಾನಸಭಾ ಚುನಾವಣೆ ಸಂದರ್ಭ ನಾಮಪತ್ರ ಸಲ್ಲಿಕೆ ವೇಳೆ ಅಫಿಡವಿಟ್‌ನಲ್ಲಿ ಅವರು 550.62 ಕೋಟಿ ರೂ. ಮೌಲ್ಯದ ಸಂಪತ್ತನ್ನು ಹೊಂದಿರುವುದಾಗಿ ಘೋಷಿಸಿದ್ದರು.
ಶಾ ಅವರು 25 ವರ್ಷಗಳ ಇತಿಹಾಸ ಹೊಂದಿರುವ ಎಂಐಸಿಐ ಉದ್ಯಮ ಸಮೂಹದ ಚೇರ್‌ಮನ್ ಆಗಿದ್ದಾರೆ. ಇತ್ತೀಚೆಗೆ ಅವರು ಅನಾರೋಗ್ಯ ಪೀಡಿತರಾಗಿದ್ದುದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆದರೆ 55 ವರ್ಷದ ಶಾ ಅವರು ತನ್ನ ಆನಾರೋಗ್ಯದ ಕುರಿತಾದ ವದಂತಿಗಳನ್ನು ತಳ್ಳಿಹಾಕಿದ್ದಾರೆ. “ರಾಜಕೀಯದಲ್ಲಿ ಕೆಮ್ಮಿದರೂ ಸಾಕು, ಆತ ಕ್ಷಯರೋಗಿಯೆಂದು ಇತರರು ಯೋಚಿಸಲಾರಂಭಿಸುತ್ತಾರೆ’’ ಎಂದು ಅವರು ಹೇಳಿದ್ದರು.