ಯುಪಿಎ ಕುರಿತ ಬಿಜೆಪಿಯ ‘‘ಶ್ವೇತಪತ್ರ’’ ಸಂಪೂರ್ಣ ರಾಜಕೀಯ ಹೇಳಿಕೆ ; ಮನಮೋಹನ್ ಸಿಂಗ್‌ ರ ಮಾಜಿ ಸಹಾಯಕ

Update: 2024-02-11 16:36 GMT

ನರೇಂದ್ರ ಮೋದಿ , ಮನಮೋಹನ್ ಸಿಂಗ್‌ | Photo: PTI 

ಹೊಸದಿಲ್ಲಿ : ಭಾರತೀಯ ಆರ್ಥಿಕತೆ ಬಗ್ಗೆ ಮೋದಿ ಸರಕಾರ ಪ್ರಕಟಿಸಿರುವ ‘‘ಶ್ವೇತಪತ್ರ’’ವು ರಾಜಕೀಯ ಹೇಳಿಕೆಯಲ್ಲದೆ ಮತ್ತೇನೂ ಅಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ರ ಸಲಹೆಗಾರರಾಗಿದ್ದ ಸಂಜಯ ಬರು ಹೇಳಿದ್ದಾರೆ.

ಮೋದಿ ಸರಕಾರದ ‘‘ಶ್ವೇತಪತ್ರ’’ವು, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ‘‘ದುಸ್ಸಾಹಸಿ ನೀತಿಗಳನ್ನು’’ ಟೀಕಿಸುತ್ತದೆ.

‘‘ಅದು ಸಂಪೂರ್ಣ ರಾಜಕೀಯ ಹೇಳಿಕೆಯಾಗಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಭಾರತೀಯ ಆರ್ಥಿಕತೆಯು 8-9 ಶೇಕಡ ದರದಲ್ಲಿ ಬೆಳೆದಿತ್ತು. 2007ರಲ್ಲಿ, ಭಾರತವು 9 ಶೇಕಡ ಆರ್ಥಿಕ ಬೆಳವಣಿಗೆಯೊಂದಿಗೆ ತನ್ನ ಅತ್ಯಧಿಕ ಜಿಡಿಪಿ (ಒಟ್ಟು ದೇಶಿ ಉತ್ಪನ್ನ) ಬೆಳವಣಿಗೆಯನ್ನು ಸಾಧಿಸಿತ್ತು ಮತ್ತು ಅತಿ ವೇಗವಾಗಿ ಬೆಳೆದ ಜಗತ್ತಿನ ಎರಡನೇ ಪ್ರಮುಖ ಆರ್ಥಿಕ ಶಕ್ತಿಯಾಗಿತ್ತು’’ ಎಂದು ರಾಜಕೀಯ ವೀಕ್ಷಕ ಮತ್ತು ನೀತಿ ವಿಶ್ಲೇಷಕರೂ ಆಗಿರುವ ಬರು ‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಬರು 2004ರಿಂದ 2008ರವರೆಗೆ ಪ್ರಧಾನಿ ಮನಮೋಹನ್ ಸಿಂಗ್‌ ರ ಮಾಧ್ಯಮ ಸಲಹೆಗಾರ ಹಾಗೂ ಪ್ರಧಾನಿ ಕಚೇರಿ (ಪಿಎಮ್ಒ)ಯ ಮುಖ್ಯ ವಕ್ತಾರರಾಗಿದ್ದರು.

‘‘ಯುಪಿಎ ಅವಧಿಯಲ್ಲಿ ಭಾರತವು ಅತ್ಯಧಿಕ ದರದಲ್ಲಿ ಬೆಳವಣಿಗೆ ಹೊಂದಿತು, ಬಡತನದಲ್ಲಿ ತೀವ್ರ ಇಳಿಕೆ ಕಂಡು ಬಂದಿತು ಮತ್ತು ರಫ್ತಿನಲ್ಲಿ ಸಾರ್ವಕಾಲಿಕ ಬೆಳವಣಿಗೆ ದಾಖಲಾಯಿತು ಎನ್ನುವ ಸತ್ಯವನ್ನು ಯಾವುದೇ ವೃತ್ತಿಪರ ಅರ್ಥಶಾಸ್ತ್ರಜ್ಞ ಒಪ್ಪಿಕೊಳ್ಳುತ್ತಾನೆ. ಆಡಳಿತದಲ್ಲಿರುವ ಸರಕಾರಕ್ಕೆ ರಾಜಕೀಯ ಮಾಡುವ ಅವಕಾಶವಂತೂ ಖಂಡಿತಾ ಇದೆ. ಈ ಶ್ವೇತಪತ್ರವೂ ಅದೇ ಆಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.

2014 ಎಪ್ರಿಲ್ ನಲ್ಲಿ, ಸಂಜಯ ಬರು ಅವರ ಪುಸ್ತಕ ‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಎಂಬ ಹೆಸರಿನ ಪುಸ್ತಕವನ್ನು ಪೆಂಗ್ವಿನ್ ಇಂಡಿಯಾ ಪ್ರಕಟಿಸಿತು. ಪುಸ್ತಕವು ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿನ ಬರು ಅವರ ಅನುಭವವಾಗಿತ್ತು. ಆರ್ಥಿಕ ತಜ್ಞ ಪ್ರಧಾನಿಯು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಸಂಪೂರ್ಣವಾಗಿ ಶರಣಾಗಿದ್ದರು ಎಂಬುದಾಗಿ ತನ್ನ ಪುಸ್ತಕದಲ್ಲಿ ಬರು ಆರೋಪಿಸಿದ್ದಾರೆ. ಪ್ರಧಾನಿ ಕಚೇರಿ ಸೇರಿದಂತೆ, ಮನಮೋಹನ್ ಸಿಂಗ್ ಸರಕಾರದ ಮೇಲೆ ಸೋನಿಯಾ ಗಾಂಧಿ ಗಣನೀಯ ಪ್ರಭಾವ ಹೊಂದಿದ್ದರು ಎಂಬುದಾಗಿ ಅವರು ಪುಸ್ತಕದಲ್ಲಿ ಬರೆದಿದ್ದರು.

1980-2000 ನಡುವಿನ ಅವಧಿಯಲ್ಲಿ ಭಾರತದ ಬೆಳವಣಿಗೆ 5.5 ಶೇಕಡವಾಗಿತ್ತು ಎನ್ನುವುದು ಸತ್ಯ ಎಂದು ಹೇಳಿರುವ ಬರು, ಆದರೆ ದಶಕದ ಅವಧಿಯ ಆರ್ಥಿಕ ಸುಧಾರಣೆಗಳೂ ಫಲ ಕೊಡಲು ಆರಂಭಿಸಿದಾಗ, 2000ದ ಬಳಿಕ ದೇಶದ ಆರ್ಥಿಕತೆಯು 8 ಶೇಕಡಕ್ಕೆ ಬೆಳೆಯಿತು ಎಂದಿದ್ದಾರೆ.

‘‘ತಪ್ಪುಗಳಿರಬಹುದು, ಎಲ್ಲಾ ಸರಕಾರಗಳು ತಪ್ಪುಗಳನ್ನು ಮಾಡುತ್ತವೆ. ಆದರೆ, ಮನಮೋಹನ್ ಸಿಂಗ್‌ ರ 10 ವರ್ಷಗಳ ಆಡಳಿತವು ಆರ್ಥಿಕ ಬಿಕ್ಕಟ್ಟು, ದುರಾಡಳಿತ, ಆರ್ಥಿಕ ಶಿಸ್ತಿನ ಬಿಕ್ಕಟ್ಟು, ಕೈಗಾರಿಕಾ ನೀತಿ ಬಿಕ್ಕಟ್ಟು, ಬ್ಯಾಂಕಿಂಗ್ ಬಿಕ್ಕಟ್ಟಿನ ಅವಧಿಯಾಗಿತ್ತು ಮತ್ತು ಈ ಅವಧಿಯಲ್ಲಿ ಭಾರತದ ಆರ್ಥಿಕತೆ ಅತ್ಯಂತ ದುರ್ಬಲವಾಗಿತ್ತು ಎಂದು ಹೇಳುವುದು ಸಂಪೂರ್ಣ ಸುಳ್ಳು’’ ಎಂದು ಬರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News