ವಿನೇಶ್ ಫೋಗಟ್, ಬಜರಂಗ್ ಪೂನಿಯಾ ಬಗ್ಗೆ ಹೇಳಿಕೆ ನೀಡುವುದನ್ನು ನಿಲ್ಲಿಸಿ : ಬ್ರಿಜ್ ಭೂಷಣ್‌ಗೆ ಬಿಜೆಪಿ ವರಿಷ್ಠರ ಎಚ್ಚರಿಕೆ
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷ ಸೇರಿರುವ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡದಂತೆ ಬಿಜೆಪಿಯು ಮಾಜಿ ಸಂಸದ, ಕುಸ್ತಿ ಫೆಡರೇಷನ್ ನಿಕಟಪೂರ್ವ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಗೆ ಎಚ್ಚರಿಕೆ ನೀಡಿದೆ ಎಂದು The Hindu ವರದಿ ಮಾಡಿದೆ.
ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯಲಿರುವ ಹರಿಯಾಣದಲ್ಲಿ ಬ್ರಿಜ್ ಭೂಷಣ್ ಹೇಳಿಕೆಗೆ ಪಕ್ಷದ ಒಳಗಿನಿಂದಲೇ ವಿರೋಧ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಹರಿಯಾಣದಲ್ಲಿ ಬಿಜೆಪಿಗೆ ಚುನಾವಣೆಯಲ್ಲಿ ಅನುಕೂಲಕರ ವಾತವರಣವಿಲ್ಲದಿರುವುದು ಪಕ್ಷದ ನಾಯಕರಿಗೆ ಸವಾಲಾಗಿದೆ. ಈ ಮಧ್ಯೆ ಬ್ರಿಜ್ ಭೂಷಣ್ ಹೇಳಿಕೆಯಿಂದ ಪಕ್ಷವು ಮತ್ತಷ್ಟು ಇಕ್ಕಟ್ಟಿಗೆ ಸಿಲುಕುವ ಸಂಭವವಿದೆ ಎನ್ನಲಾಗಿದೆ.
ಈ ಕುರಿತು ಮಧ್ಯಪ್ರವೇಶಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರು, ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬ್ರಿಜ್ ಭೂಷಣ್ ವಿರುದ್ಧ ಕಿರುಕುಳದ ಆರೋಪ ಹೊರಿಸಿದ ಇಬ್ಬರು ಕುಸ್ತಿಪಟುಗಳ ಬಗ್ಗೆ ಹೇಳಿಕೆ ನೀಡದಂತೆ ಖುದ್ದಾಗಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ.
ತಮ್ಮ ವಿರುದ್ಧ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪೂನಿಯಾ 2023ರ ಜನವರಿಯಲ್ಲಿ ನಡೆಸಿದ ಪ್ರತಿಭಟನೆ ಕಾಂಗ್ರೆಸ್ ಪಕ್ಷವು ಕುಮ್ಮಕ್ಕು ನೀಡಿತ್ತು. ಅದು ರಾಜಕೀಯ ಪ್ರೇರಿತ ಪ್ರತಿಭಟನೆಯಾಗಿತ್ತು. ಕಾಂಗ್ರೆಸ್ ನಾಯಕರಾದ ಭೂಪಿಂದರ್ ಸಿಂಗ್ ಹೂಡಾ, ದೀಪೇಂದರ್ ಹೂಡಾ, ಮತ್ತು ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಕುಮ್ಮಕ್ಕಿನಿಂದ ಕುಸ್ತಿಪಟುಗಳು ಪ್ರತಿಭಟನೆ ಮಾಡಿದ್ದರು ಎಂದು ಇಬ್ಬರು ಕುಸ್ತಿಪಟುಗಳು ಕಾಂಗ್ರೆಸ್ ಪಕ್ಷ ಸೇರಿದ ದಿನ ಬ್ರಿಜ್ ಭೂಷಣ್ ಆರೋಪಿಸಿದ್ದರು.
ಕಾಂಗ್ರೆಸ್ ಪಕ್ಷ ಸೇರಿದ ದಿನ, ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಕುಸ್ತಿಪಟು ವಿನೇಶ್ ಫೋಗಟ್, ದಿಲ್ಲಿಯ ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಕುಸ್ತಿಪಟುಗಳನ್ನು ರಸ್ತೆಯಲ್ಲಿ ಎಳೆದಾಡಿದಾಗ ಕಾಂಗ್ರೆಸ್ ಪಕ್ಷವು ಕುಸ್ತಿಪಟುಗಳನ್ನು ಬೆಂಬಲಿಸಿತ್ತು. ಆದರೆ ಬಿಜೆಪಿಯು ಬ್ರಿಜ್ ಭೂಷಣ್ ಪರ ನಿಂತಿತ್ತು ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಮತ್ತೊಬ್ಬ ಕುಸ್ತಿಪಟು ಬಜರಂಗ್ ಪೂನಿಯಾ ದನಿಗೂಡಿಸಿದ್ದರು.
ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಕ್ರೀಡಾಕೂಟದಲ್ಲಿ ಫೋಗಟ್ ಅವರು ತಮ್ಮ ತೂಕದ ವರ್ಗಕ್ಕಿಂತ ಕೇವಲ 100 ಗ್ರಾಂ ಹಹೆಚ್ಚಿದ್ದ ಕಾರಣ ಒಲಿಂಪಿಕ್ ಪದಕದಿಂದ ವಂಚಿತರಾದರು. ಭಾವನಾತ್ಮಕವಾಗಿ ಈ ಬೆಳವಣಿಗೆಯು ವಿನೇಶ್ ಪರವಾದ ಅಭಿಪ್ರಾಯದ ಬಿರುಗಾಳಿಯೇ ಎಬ್ಬಿಸಿದೆ. ಈ ಪರಿಸ್ಥಿತಿಯಲ್ಲಿ, ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಇಂತಹ ಹೇಳಿಕೆಗಳನ್ನು ನೀಡುವುದು ಹರಿಯಾಣದಲ್ಲಿ ಪಕ್ಷಕ್ಕೆ ಮತ್ತಷ್ಟು ಹಿನ್ನಡೆಯುಂಟು ಮಾಡಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಈ ಮಧ್ಯೆ ವಿನೇಶ್ ಫೋಗಟ್ ಅವರು ರವಿವಾರ ತಮ್ಮ ಕ್ಷೇತ್ರವಾದ ಜೂಲಾನಾದಲ್ಲಿ ರೋಡ್ ಶೋ ಮೂಲಕ ವಿಧಾನಸಭಾ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದಾರೆ.