ಗುಜರಾತ್ | ಬಳಕೆಯಾಗದೇ ಉಳಿದ ʼನಿರ್ಭಯಾ ನಿಧಿʼ : ಸಿಎಜಿ ವರದಿ
ಅಹ್ಮದಾಬಾದ್ : ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪಾಲ (ಸಿಎಜಿ)ರ 2023ರ ವರದಿಯು ಮಹಿಳೆಯರ ಸುರಕ್ಷತೆಗಾಗಿರುವ ನಿರ್ಭಯಾ ನಿಧಿಯ ನಿರ್ವಹಣೆಯಲ್ಲಿ ಗುಜರಾತ್ ಸರಕಾರದ ಪ್ರಮುಖ ಲೋಪವನ್ನು ಬೆಟ್ಟು ಮಾಡಿದೆ.
ಗುಜರಾತ್ ರಾಜ್ಯ ಪೋಲಿಸ್ ವಸತಿ ನಿಗಮ ಲಿಮಿಟೆಡ್ (ಜಿಎಸ್‌ಪಿಎಚ್‌ಸಿಎಲ್) ನಲ್ಲಿ ನಿರ್ಭಯಾ ನಿಧಿಯ 118.75 ಕೋಟಿ ರೂ.ಗಳು ಬಳಕೆಯಾಗದೆ ಉಳಿದುಕೊಂಡಿದ್ದು, ವಿತ್ತವರ್ಷ 2020-21 ಮತ್ತು ವಿತ್ತವರ್ಷ 2021-22 (2021,ಜೂ.30ರವರೆಗೆ) 3.21 ಕೋಟಿ ರೂ.ಬಡ್ಡಿಯನ್ನು ಗಳಿಸಿದೆ. ನಿಯಮಗಳ ಪ್ರಕಾರ ಬಡ್ಡಿಯ ಶೇ.60ರಷ್ಟು ಮೊತ್ತ ಅಂದರೆ 1.92 ಕೋಟಿ ರೂ.ಭಾರತದ ಸಂಚಿತ ನಿಧಿಗೆ ರವಾನೆಯಾಗಬೇಕಿತ್ತು, ಆದರೆ ಜಿಎಸ್‌ಪಿಎಚ್‌ಸಿಎಲ್ 3.21 ಕೋಟಿ ರೂ.ಗಳ ಸಂಪೂರ್ಣ ಮೊತ್ತವನ್ನು ರಾಜ್ಯ ಸಂಚಿತ ನಿಧಿಗೆ ತಪ್ಪಾಗಿ ಜಮೆ ಮಾಡಿದೆ. ತನ್ಮೂಲಕ ಹಣಕಾಸು ನಿಯಮಗಳನ್ನು ಉಲ್ಲಂಘಿಸಿದೆ.
ನಿರ್ಭಯಾ ನಿಧಿಯ ಗಮನಾರ್ಹ ಮೊತ್ತವು ಬಳಕೆಯಾಗದೆ ಉಳಿದಿರುವುದನ್ನು ಸಿಎಜಿ ವರದಿಯು ಎತ್ತಿ ತೋರಿಸಿದೆ. ಅಹ್ಮದಾಬಾದ್ ಮಹಾನಗರ ಪಾಲಿಕೆಯಲ್ಲಿ 25 ಕೋಟಿ ರೂ. ಮತ್ತು ಗುಜರಾತ್ ರಾಜ್ಯ ಹಣಕಾಸು ಸೇವೆಗಳು ನಿ.( ಜಿಎಸ್‌ಎಫ್‌ಎಸ್‌ಎಲ್)ದಲ್ಲಿ 118.75 ಕೋಟಿ ರೂ.ಗಳು,ಹೀಗೆ ಒಟ್ಟು 143.75 ಕೋಟಿ ರೂ.ಗಳು ಬಳಕೆಯಾಗದೆ ಉಳಿದಿವೆ. ಅಲ್ಲದೆ ನಿರ್ಭಯಾ ಯೋಜನೆಯಡಿ ಸೇಫ್ ಸಿಟಿ ಪ್ರಾಜೆಕ್ಟ್ ಮತ್ತು ಮಹಿಳೆಯರು ಹಾಗೂ ಮಕ್ಕಳ ವಿರುದ್ಧ ಸೈಬರ್ ಅಪರಾಧ ತಡೆಗೆ ಹಂಚಿಕೆ ಮಾಡಲಾಗಿದ್ದ 57.66 ಲಕ್ಷ ರೂ.ಗಳನ್ನು ಐದು ವರ್ಷಗಳ ಬಳಿಕವೂ(ಮಾರ್ಚ್ 2023ಕ್ಕೆ ಇದ್ದಂತೆ) ಬಳಕೆ ಮಾಡಲಾಗಿಲ್ಲ.
ನಿರ್ಭಯಾ ನಿಧಿಗೆ ಸಂಬಂಧಿಸಿದ ಅನುದಾನದ ಬಳಕೆಯಾಗದ ಹಣವನ್ನು ಜಿಎಸ್‌ಪಿಎಚ್‌ಸಿಎಲ್ ಮೂಲಕ ಜಿಎಸ್‌ಎಫ್‌ಎಸ್‌ಎಲ್‌ನಲ್ಲಿ ಠೇವಣಿಯಿರಿಸಲಾಗಿದೆ ಎನ್ನುವುದನ್ನು 2023, ಮಾ.31ಕ್ಕೆ ಅಂತ್ಯಗೊಂಡ ವರ್ಷಕ್ಕೆ ಸಿಎಜಿಯ ರಾಜ್ಯ ಹಣಕಾಸು ಲೆಕ್ಕ ಪರಿಶೋಧನಾ ವರದಿಯು ಬಹಿರಂಗಗೊಳಿಸಿದೆ.
2018-19 ಮತ್ತು 2020-21ರ ನಡುವೆ ಅಹ್ಮದಾಬಾದ್ ನಗರದ ಜಂಟಿ ಪೋಲಿಸ್ ಆಯುಕ್ತರು ಭಾರತ ಸರಕಾರದಿಂದ ಮತ್ತು ರಾಜ್ಯ ಸರಕಾರದಿಂದ 220.11 ಕೋಟಿ ರೂ.ಗಳ ಅನುದಾನವನ್ನು ಸ್ವೀಕರಿಸಿದ್ದಾರೆ. 2023, ಜುಲೈನಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಲಾಗಿರುವ ಬಳಕೆ ಪ್ರಮಾಣಪತ್ರದನ್ವಯ 76.36 ಕೋಟಿ ರೂ.(ಶೇ 34.69)ಗಳನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ಉಳಿದ 143.75 ಕೋಟಿ ರೂ.ಗಳನ್ನು ಬದ್ಧ ಹೊಣೆಗಾರಿಕೆಗಳನ್ನಾಗಿ ಪಟ್ಟಿ ಮಾಡಲಾಗಿದೆ.
ಯೋಜನೆಯ ನಿಧಿಯ ನಿಬಂಧನೆಗಳ ಪ್ರಕಾರ ವೆಚ್ಚಗಳನ್ನು ಭಾರತ ಸರಕಾರ ಮತ್ತು ರಾಜ್ಯದ ನಡುವೆ 60:40 ಅನುಪಾತದಲ್ಲಿ ವಿಂಗಡಿಸಲಾಗಿದೆ. ಗಳಿಸಿದ ಹಣವನ್ನು ಅದೇ ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಜಮೆ ಮಾಡಬೇಕು.
2022, ಮಾರ್ಚ್‌ಗೆ ಇದ್ದಂತೆ ನಿರ್ಭಯಾ ಯೋಜನೆಯಡಿ ಬಳಕೆಯಾಗದ ಅನುದಾನದಲ್ಲಿ 150.02 ಕೋಟಿ ರೂ.ಗಳು ಜಿಎಸ್‌ಪಿಎಚ್‌ಸಿಎಲ್ ಮೂಲಕ ಜಿಎಸ್‌ಎಫ್‌ಎಸ್‌ಎಲ್‌ನಲ್ಲಿ ಉಳಿದುಕೊಂಡಿವೆ ಎಂದು ಸಿಎಜಿ ವರದಿಯು ತಿಳಿಸಿದೆ.