“ಸೋನಿಯಾ ಗಾಂಧಿಗೆ ಸಂಪ್ರದಾಯ ಗೊತ್ತಿರಲಿಕ್ಕಿಲ್ಲ”: ಪ್ರಧಾನಿಗೆ ಬರೆದ ಪತ್ರಕ್ಕೆ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ
ಹೊಸದಿಲ್ಲಿ: ಸಂಸತ್ತಿನ ವಿಶೇಷ ಅಧಿವೇಶನದ ಕುರಿತು ಕಾಂಗ್ರೆಸ್ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ 9 ಅಂಶಗಳ ಪತ್ರಕ್ಕೆ ಕೇಂದ್ರ ಸರ್ಕಾರದಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸೋನಿಯಾ ಗಾಂಧಿ ಅವರಿಗೆ ಬಹುಶಃ ಸಂಪ್ರದಾಯಗಳ ಬಗ್ಗೆ ತಿಳಿದಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಸಿದ್ದಾರೆ.
ಅಧಿವೇಶನ ಪ್ರಾರಂಭವಾದ ನಂತರವೇ ಸರ್ಕಾರವು ಪ್ರತಿಪಕ್ಷಗಳೊಂದಿಗೆ ಅಜೆಂಡಾವನ್ನು ಚರ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.
ದೇಶದ ಹೆಸರನ್ನು ಭಾರತ್ ಎಂದು ಬದಲಾಯಿಸುವ ಬಗ್ಗೆ ಎದ್ದಿರುವ ರಾಜಕೀಯ ಕೋಲಾಹಲದ ನಡುವೆಯೇ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.
ಸೆಪ್ಟೆಂಬರ್ 18 ರಿಂದ ಪ್ರಾರಂಭವಾಗುವ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಯಾವುದೇ ಕಾರ್ಯಸೂಚಿಯನ್ನು ಘೋಷಿಸಲಾಗಿಲ್ಲ ಎಂದು ಒತ್ತಿಹೇಳಿದ ಸೋನಿಯಾ ಗಾಂಧಿ ಅವರು, ಒಂಬತ್ತು ವಿಷಯಗಳನ್ನು ಪಟ್ಟಿ ಮಾಡಿದ್ದು, ಅವುಗಳ ಮೇಲೆ ಚರ್ಚೆ ನಡೆಸುವಂತೆ ಆಗ್ರಹಿಸಿದ್ದರು.
ಈ ಪಟ್ಟಿಯಲ್ಲಿ ಬೆಲೆ ಏರಿಕೆ, ಕೇಂದ್ರ-ರಾಜ್ಯ ಸಂಬಂಧ, ಕೋಮುವಾದ, ಮಣಿಪುರದ ಪರಿಸ್ಥಿತಿ ಮತ್ತು ಚೀನಾದೊಂದಿಗಿನ ಗಡಿ ಸಂಘರ್ಷ ಸೇರಿವೆ.
ಇದಾಗಿ ಕೆಲವೇ ಗಂಟೆಗಳಲ್ಲಿ ಸಂಸದೀಯ ವ್ಯವಹಾರಗಳ ಸಚಿವರು ಪ್ರತಿಕ್ರಿಯಿಸಿದ್ದು, "ಸಂಪ್ರದಾಯ ಅನುಸರಿಸಿ ಅಧಿವೇಶನ ಕರೆಯಲಾಗಿದೆ. ಬಹುಶಃ ನೀವು ಸಂಪ್ರದಾಯಕ್ಕೆ ಗಮನ ಕೊಡುತ್ತಿಲ್ಲ. ಸಂಸತ್ತಿನ ಅಧಿವೇಶನ ಕರೆಯುವ ಮೊದಲು ರಾಜಕೀಯ ಪಕ್ಷಗಳೊಂದಿಗೆ ಯಾವುದೇ ಚರ್ಚೆಯಾಗಲೀ ಅಥವಾ ವಿಷಯಗಳ ಬಗ್ಗೆ ಚರ್ಚೆಯಾಗಲೀ ನಡೆಸಲಾಗುವುದಿಲ್ಲ. ರಾಷ್ಟ್ರಪತಿಗಳು ಅಧಿವೇಶನ ಕರೆದ ನಂತರ ಮತ್ತು ಮೊದಲು ಅಧಿವೇಶನದ ಪ್ರಾರಂಭದಲ್ಲಿ ಎಲ್ಲಾ ಪಕ್ಷಗಳ ನಾಯಕರ ಸಭೆ ಇದೆ, ಅದರಲ್ಲಿ ಸಂಸತ್ತಿನಲ್ಲಿ ಎತ್ತಲಾಗುವ ಸಮಸ್ಯೆಗಳು ಮತ್ತು ಕೆಲಸಗಳ ಬಗ್ಗೆ ಚರ್ಚಿಸಲಾಗುತ್ತದೆ” ಎಂದು ಪ್ರಹ್ಲಾದ್ ಜೋಶಿ ಉತ್ತರಿಸಿದ್ದಾರೆ.