4 ವರ್ಷದ ಮಗನನ್ನು ಕೊಂದು ಮೃತದೇಹವನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಬೆಂಗಳೂರಿನ ಸ್ಟಾರ್ಟ್‌ ಅಪ್‌ ಸಿಇಒ ಬಂಧನ

Update: 2024-01-09 07:03 GMT

ಸುಚನಾ ಸೇಠ್‌ (Photo:X)

ಗೋವಾ: ಬೆಂಗಳೂರಿನ ಸ್ಟಾರ್ಟ್‌-ಅಪ್‌ ಸಂಸ್ಥೆ ಮೈಂಡ್‌ಫುಲ್‌ ಎಐ ಇದರ ಸಿಇಒ ಆಗಿರುವ ಸುಚನಾ ಸೇಠ್‌ (39)ಎಂಬಾಕೆಯನ್ನು ಗೋವಾದ ಅಪಾರ್ಟ್‌ಮೆಂಟ್‌ ಒಂದರಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಕೊಂದ ಆರೋಪದ ಮೇಲೆ ಬಂಧಿಸಲಾಗಿದೆ. ಆಕೆ ಗೋವಾದ ಅಪಾರ್ಟ್‌ಮೆಂಟ್‌ನಿಂದ ತನ್ನ ಮಗನ ಮೃತದೇಹವನ್ನು ಹೊಂದಿದ್ದ ಬ್ಯಾಗ್‌ನೊಂದಿಗೆ ಕರ್ನಾಟಕಕ್ಕೆ ವಾಪಸ್‌ ಪ್ರಯಾಣಿಸುತ್ತಿರುವಾಗ ಆಕೆಯನ್ನು ಚಿತ್ರದುರ್ಗದಲ್ಲಿ ಬಂಧಿಸಲಾಗಿದೆ.

ಉತ್ತರ ಗೋವಾದ ಕ್ಯಾಂಡೊಲಿಂನ ಅಪಾರ್ಟ್‌ಮೆಂಟ್‌ನಲ್ಲಿ ಆಕೆ ತನ್ನ ಮಗನನ್ನು ಹತ್ಯೆಗೈದಿದ್ದಾರೆ ಎಂದು ತಿಳಿಯಲಾಗಿದೆ. ಈ ಆಘಾತಕಾರಿ ಕೊಲೆಯ ಹಿಂದಿನ ಕಾರಣ ತಿಳಿದು ಬಂದಿಲ್ಲ.

ಕಳೆದ ಶನಿವಾರ ಆಕೆ ಕ್ಯಾಂಡೊಲಿಂನ ಸೊಲ್‌ ಬನ್ಯಾನ್‌ ಗ್ರಾಂಡ್‌ ಅಪಾರ್ಟ್‌ಮೆಂಟ್‌ಗೆ ಪುತ್ರನೊಂದಿಗೆ ಆಗಮಿಸಿದ್ದರು. ಆದರೆ ಸೋಮವಾರ ಆಕೆ ಚೆಕ್‌ಔಟ್‌ ಮಾಡುವಾಗ ಒಬ್ಬರೇ ಇದ್ದರು. ಬೆಂಗಳೂರಿಗೆ ಹೋಗಲು ಟ್ಯಾಕ್ಸಿ ಬುಕ್‌ ಮಾಡುವಂತೆ ಆಕೆ ಹೋಟೆಲ್‌ ಸಿಬ್ಬಂದಿಗೆ ಹೇಳಿದ್ದರು. ಟ್ಯಾಕ್ಸಿ ಬದಲು ವಿಮಾನದಲ್ಲಿ ತೆರಳುವುದು ಅಗ್ಗವಾಗುತ್ತದೆ ಎಂದು ಸಿಬ್ಬಂದಿ ಹೇಳಿದರೂ ಆಕೆ ಟ್ಯಾಕ್ಸಿಯಲ್ಲಿಯೇ ತೆರಳುವುದಾಗಿ ಹೇಳಿದ ನಂತರ ಆಕೆಗೆ ಟ್ಯಾಕ್ಸಿ ಏರ್ಪಾಟು ಮಾಡಿದ್ದರು. ಆಕೆ ಬರುವಾಗ ಮಗನೊಂದಿಗಿದ್ದುದು ಹಾಗೂ ತೆರಳುವಾಗ ಒಬ್ಬರೇ ಇದ್ದುದನ್ನು ಸಿಬ್ಬಂದಿ ಗಮನಿಸಿದ್ದರು. ಆಕೆ ತೆರಳಿದ ನಂತರ ಅಲ್ಲಿನ ನೌಕರರು ಕೊಠಡಿ ಸ್ವಚ್ಛಗೊಳಿಸುವಾಗ ರಕ್ತದ ಕಲೆಗಳನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಕಾರಿನ ಚಾಲಕನನ್ನು ಸಂಪರ್ಕಿಸಿ ಆಕೆಯ ಬಳಿ ಮಗನ ಕುರಿತು ವಿಚಾರಿಸುವಂತೆ ಹೇಳಿದ್ದರು. ಆಕೆ ಮಗ ಗೆಳತಿಯ ಬಳಿ ಇರುವುದಾಗಿ ತಿಳಿಸಿ ವಿಳಾಸ ನೀಡಿದ್ದರೂ ಅದು ನಕಲಿ ಎಂದು ತಿಳಿದು ಬಂದಿತ್ತು.

ಪೊಲೀಸರು ಮತ್ತೆ ಚಾಲಕನಿಗೆ ಕರೆ ಮಾಡಿ ಸುಚನಾ ಅವರಿಗೆ ಕೊಂಕಣಿ ತಿಳಿದಿಲ್ಲದೇ ಇರುವುದರಿಂದ ಕೊಂಕಣಿಯಲ್ಲಿ ಮಾತನಾಡಿ ಕ್ಯಾಬ್‌ ಅನ್ನು ಹತ್ತಿರದ ಚಿತ್ರದುರ್ಗ ಠಾಣೆಗೆ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದರು. ಕ್ಯಾಬ್‌ ಚಾಲಕ ಹಾಗೆಯೇ ಮಾಡಿದ್ದ. ನಂತರ ಪೊಲೀಸರು ಆಕೆಯನ್ನು ಬಂಧಿಸಿದಾಗ ಆಕೆಯ ಜೊತೆಗಿನ ಬ್ಯಾಗಿನಲ್ಲಿ ಮಗನ ಮೃತದೇಹ ಪತ್ತೆಯಾಗಿತ್ತು.

ಪೊಲೀಸರು ಆಕೆಯ ಪತಿ ಬೆಂಗಳೂರಿನಲ್ಲಿ ಎಐ ಡೆವಲಪರ್‌ ಆಗಿರವ ವೆಂಕಟ್‌ ರಾಮನ್‌ ಅವರಿಗೆ ಮಾಹಿತಿ ನೀಡಿದ್ದು ಅವರು ತಕ್ಷಣ ಧಾವಿಸಿ ಬಂದಿದ್ದಾರೆ.

ಆಕೆಯನ್ನು ಮತ್ತೆ ಗೋವಾಗೆ ವಿಚಾರಣೆಗಾಗಿ ಕರೆದೊಯ್ಯಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News