ಪಶ್ಚಿಮ ಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಬದಲಾಯಿಸಿ: ಕೇಂದ್ರಕ್ಕೆ ಮಮತಾ ಬ್ಯಾನರ್ಜಿ ಆಗ್ರಹ

Update: 2024-01-12 12:52 GMT

ಮಮತಾ ಬ್ಯಾನರ್ಜಿ | Photo: PTI 

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಬದಲಾಯಿಸಬೇಕೆಂದು ತೃಣಮೂಲ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ತಮ್ಮ ಹೆಸರುಗಳನ್ನು ಬದಲಾಯಿಸಬಹುದಾದ ರಾಜ್ಯಗಳ ಪಟ್ಟಿಯಿಂದ ಪಶ್ಚಿಮ ಬಂಗಾಳವನ್ನು ಯಾಕೆ ಹೊರಗಿಡಲಾಗಿದೆ ಎಂದು ಅವರು ಪ್ರಶ್ನಿಸಿದರು.

ತೃಣಮೂಲ ಕಾಂಗ್ರೆಸ್‌ ಸರ್ಕಾರ ತಾನು 2011ರಲ್ಲಿ ರಾಜ್ಯದಲ್ಲಿ ಮೊದಲು ಅಧಿಕಾರಕ್ಕೆ ಬಂದಾಗಲೂ ರಾಜ್ಯದ ಹೆಸರು ಬದಲಾವಣೆಗೆ ಕೋರಿತ್ತು. ಪಶ್ಚಿಮ್‌ ಬಂಗಾ ಅಥವಾ ಪಶ್ಚಿಮ್‌ ಬಂಗೊ ಹೆಸರನ್ನು ಆಗ ಸೂಚಿಸಲಾಗಿತ್ತು. ಐದು ವರ್ಷಗಳ ನಂತರ ಮಮತಾ ಮತ್ತೆ ಬೊಂಗೊ ಅಥವಾ ಬಾಂಗ್ಲಾ ಎಂದು ಮರುನಾಮಕರಣಕ್ಕೆ ಬೇಡಿಕೆಯಿಟ್ಟಿದ್ದರು. ಈಗ ಅವರು ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳಿವೆಯೆನ್ನುವಾಗ ರಾಜ್ಯದ ಹೆಸರು ಬದಲಾವಣೆಗೆ ಆಗ್ರಹಿಸಿದ್ದಾರೆ.

ಬಾಂಬೆ ಹೆಸರು ಮುಂಬೈ ಆಗಿರುವುದು, ಒರಿಸ್ಸಾ ರಾಜ್ಯದ ಹೆಸರು ಒಡಿಶಾ ಆಗಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ ಬಾಂಗ್ಲಾ ಹೆಸರು ನೀಡಿದರೆ ಇಂಗ್ಲಿಷ್‌ ಅಕ್ಷರ ಮಾಲೆಯಲ್ಲಿ ರಾಜ್ಯದ ಹೆಸರು ಹೆಚ್ಚು ಮುಂದೆ ಇರಲಿದೆ ಎಂದೂ ಅವರು ಹೇಳಿದ್ದಾರೆ.

“ನಮ್ಮ ರಾಜ್ಯದ ಹೆಸರು ಬಾಂಗ್ಲಾ ಆದರೆ ವಿವಿಧ ಸ್ಪರ್ಧೆಗಳಿಗೆ ಹಾಗೂ ಇತರ ಕಾರ್ಯಕ್ರಮಗಳಿಗೆ ಹೋಗುವ ನಮ್ಮ ಮಕ್ಕಳಿಗೂ ಅನುಕೂಲ. ಪ್ರತಿಯೊಂದು ಕಡೆ ನಾವು ಇಂಗ್ಲಿಷ್‌ ಅಕ್ಷರ ಮಾಲೆ ಪ್ರಕಾರ ರಾಜ್ಯಗಳ ಹೆಸರು ಪರಿಗಣನೆಗೆ ತೆಗೆದುಕೊಳ್ಳುವಾಗ ಕೊನೆಯ ತನಕ ಕಾಯಬೇಕಾಗುತ್ತದೆ,” ಎಂದು ಅವರು ಹೇಳಿದರು.

ಮೇಲಾಗಿ ರಾಜ್ಯದ ಹೆಸರಿನ ಜೊತೆ ಪಶ್ಚಿಮ ಪದದ ಅಗತ್ಯವಿಲ್ಲ, ಪಾಕಿಸ್ತಾನದಲ್ಲೂ ಒಂದು ಪಂಜಾಬ್‌ ಇದ್ದರೂ ನಮ್ಮ ದೇಶದ ಪಂಜಾಬ್‌ ಅನ್ನು ಪ್ರತ್ಯೇಕಿಸಲು ಬೇರೆ ಯಾವುದೇ ಹೆಸರು ಬದಲಾವಣೆ ಮಾಡಲಾಗಿಲ್ಲ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News