ಚತ್ತೀಸ್‌ಗಡ: ಗುಂಡಿನ ಕಾಳಗದಲ್ಲಿ ಮೂವರು ಶಂಕಿತ ನಕ್ಸಲೀಯರು ಸಾವು

Update: 2024-02-25 16:53 GMT

Photo Credit: Twitter

ರಾಯಪುರ: ಚತ್ತೀಸ್‌ಗಡದ ಕಂಕೇರ್ ಜಿಲ್ಲೆಯಲ್ಲಿ ಶಂಕಿತ ನಕ್ಸಲೀಯರು ಹಾಗೂ ಭದ್ರತಾ ಪಡೆ ಸಿಬ್ಬಂದಿ ನಡುವೆ ರವಿವಾರ ನಡೆದ ಗುಂಡಿನ ಕಾಳಗದಲ್ಲಿ ಮೂವರು ನಕ್ಸಲೀಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ ಹಾಗೂ ಗಡಿ ಭದ್ರತಾ ಪಡೆಯ ಜಂಟಿ ತಂಡ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸಿದ ಸಂದರ್ಭ ಕೊಯಾಲಿಬೇಡ ಪ್ರದೇಶದ ಅರಣ್ಯದಲ್ಲಿ ಗುಂಡಿನ ಕಾಳಗ ನಡೆಯಿತು ಎಂದು ಕಂಕೇರ್‌ನ ಪೊಲೀಸ್ ಅಧೀಕ್ಷಕ ಇಂದಿರಾ ಕಲ್ಯಾಣ್ ಎಲೆಸೇಲಾ ತಿಳಿಸಿದ್ದಾರೆ.

ಮಾವೋವಾದಿ ಕಂಪೆನಿ ಸಂಖ್ಯೆ 5ಕ್ಕೆ ಸೇರಿದ ಕಾರ್ಯಕರ್ತರು ಭೋಮ್ರ, ಹರ್ತರೈ ಹಾಗೂ ಮಿಚ್ಛೆಬೇಡ ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದಾರೆ ಎಂದು ಭದ್ರತಾ ಪಡೆಗಳು ಮಾಹಿತಿ ಸ್ವೀಕರಿಸಿದ್ದವು. ಈ ಹಿನ್ನೆಲೆಯಲ್ಲಿ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ (ಡಿಆರ್‌ಜಿ) ಹಾಗೂ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ 30ನೇ ಬೆಟಾಲಿಯನ್‌ನ ಜಂಟಿ ತಂಡವನ್ನು ಶನಿವಾರ ರಾತ್ರಿ ಅಲ್ಲಿಗೆ ಕಳುಹಿಸಿ ಕೊಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲೀಯರು ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ ಸಂದರ್ಭ ಗುಂಡಿನ ಚಕಮಕಿ ನಡೆಯಿತು. ಬಳಿಕ ಗುಂಡಿನ ಕಾಳಗ ನಡೆದ ಸ್ಥಳದಲ್ಲಿ ಮೂವರು ನಕ್ಸಲೀಯರ ಮೃತದೇಹಗಳು ಪತ್ತೆಯಾಗಿವೆ. ಅಲ್ಲದೆ ಗನ್‌ಗಳು, ದಿನನಿತ್ಯ ಬಳಕೆಯ ಕೆಲವು ವಸ್ತುಗಳು ಹಾಗೂ ಮಾವೋವಾದಿಗಳಿಗೆ ಸಂಬಂಧಿಸಿದ ಸಾಹಿತ್ಯಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ರಾಜ್ಯದ ನಕ್ಸಲ್ ಪ್ರಭಾವಿತ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲೀಯರು ಅಳವಡಿಸಿದ ಐಇಡಿ ರವಿವಾರ ಸ್ಫೋಟಗೊಂಡು ಚತ್ತೀಸ್‌ಗಡ ಶಸಸ್ತ್ರಪಡೆಯ ಸಿಬ್ಬಂದಿಯೋರ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News