ರಿಯಲ್ ಎಸ್ಟೇಟ್ ಉದ್ಯಮಿಯಿಂದ 10 ಕೋಟಿ ರೂ. ಸುಲಿಗೆ ಯತ್ನ | ಛೋಟಾರಾಜನ್ ಗ್ಯಾಂಗ್ ನ ಐವರ ಬಂಧನ
ಮುಂಬೈ : ರಿಯಲ್‌ಎಸ್ಟೇಟ್ ಉದ್ಯಮಿಯನ್ನು ಬೆದರಿಸಿ, 10 ಕೋಟಿ ರೂ. ಸುಲಿಗೆ ಮಾಡಲು ಯತ್ನಿಸಿದ್ದರೆನ್ನಲಾದ ಛೋಟಾ ರಾಜನ್ ಗ್ಯಾಂಗ್ ನ ಐದು ಮಂದಿಯನ್ನು ಮುಂಬೈ ಪೊಲೀಸರ ಸುಲಿಗೆ ನಿಗ್ರಹ ಘಟಕವು ಗುರುವಾರ ಬಂಧಿಸಿದೆ.
ಉದ್ಯಮಿಯು ಆರೋಪಿಗಳಿಗೆ ಕಳೆದ ವರ್ಷ 5 ಲಕ್ಷ ರೂ. ಪಾವತಿಸಿದ್ದರೆನ್ನಲಾಗಿದೆ. ಆದರೆ ಆರೋಪಿಗಳು ಇನ್ನೂ ಹೆಚ್ಚು ಹಣ ನೀಡುವಂತೆ ಅವರು ಬೆದರಿಕೆಯೊಡ್ಡಿದ್ದರೆಂದು ತಿಳಿದುಬಂದಿದೆ. ಬಂಧಿತ ಆರೋಪಿಗಳನ್ನು ಗಣೇಶ್ ಸೋರಾಡಿ ಯಾನೆ ಡೇನಿ, ಪ್ರದೀಪ್ ಯಾದವ್, ಮನೀಶ್ ಭಾರದ್ವಾಜ್, ರೆಮಿ ಫೆರ್ನಾಂಡಿಸ್ ಹಾಗೂ ಶಶಿ ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ.
ಬಂಧನದಲ್ಲಿರುವ ಛೋಟಾ ರಾಜನ್ ನ ಇಬ್ಬರು ನಿಕಟವರ್ತಿಗಳಾದ ಸತೀಶ್ ಕಾಲಿಯಾ ಹಾಗೂ ಪೌಲ್ಸನ್ ಅವರನ್ನು ಪೊಲೀಸರು ಆರೋಪಿಗಳೆಂದು ಹೆಸರಿಸಿದ್ದರೂ ಅವರನ್ನು ಇನ್ನಷ್ಟೇ ಬಂಧಿಸಬೇಕಾಗಿದೆ.
ಬಾಂದ್ರಾ ನಿವಾಸಿಯಾದ ರಿಯಲ್ ಎಸ್ಟೇಟ್ ಉದ್ಯಮಿಯು 2023ರಲ್ಲಿ ಮಹಿಳೆಯೊಬ್ಬರಿಂದ ಬಾಂದ್ರಾ (ಪಶ್ಚಿಮ)ದಲ್ಲಿರುವ 1300 ಚದರ ಮೀಟರ್ ವಿಸ್ತೀರ್ಣದ ನಿವೇಶನವನ್ನು 15 ಕೋಟಿ ರೂ.ಗೆ ಖರೀದಿಸಿದ್ದರು. ನಿವೇಶನ ಮಾರಾಟದ ವಿಷಯ ತಿಳಿದ ಬಳಿಕ ಆರೋಪಿಗಳಾದ ಡೇನಿ ಹಾಗೂ ಯಾದವ್, ದೂರುದಾರ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಭೇಟಿಯಾಗಿ ಭೂ ವ್ಯವಹಾರ ನಡೆದಿರುವುದರ ಬಗ್ಗೆ ವಿಚಾರಿಸಿದ್ದರು. ಆನಂತರ ಪೌಲ್ಸನ್ ಹಾಗೂ ಕಾಲಿಯಾ ಅವರು 10 ಕೋಟಿ ರೂ. ನೆರವು ನೀಡುವಂತೆ, ಇಲ್ಲದಿದ್ದಲ್ಲಿ ಕೊಲೆಗೈಯುವ ಬೆದರಿಕೆಯೊಡ್ಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ.