ಒಡಿಶಾದಲ್ಲಿ ಪ್ರತಿ ದಿನ ಮೂರು ಬಾಲ್ಯವಿವಾಹ ; ಅಗ್ರ ಸ್ಥಾನದಲ್ಲಿ ನಬರಂಗ್ಪುರ ಜಿಲ್ಲೆ!

ಸಾಂದರ್ಭಿಕ ಚಿತ್ರ | PC : freepik.com
ಭುವನೇಶ್ವರ: ಸರಕಾರಿ ಅಂಕಿಅಂಶಗಳ ಪ್ರಕಾರ ರಾಜ್ಯಸರಕಾರವು ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದರೂ ಕಳೆದ ಆರು ವರ್ಷಗಳಲ್ಲಿ ಪ್ರತಿದಿನ ಕನಿಷ್ಠ ಮೂರು ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ.
ಬುಡಕಟ್ಟು ಪದ್ಧತಿ, ವರದಕ್ಷಿಣೆ, ಕಾರ್ಮಿಕ ಕುಟುಂಬಗಳ ವಲಸೆ ಮತ್ತು ತಮ್ಮ ಹೆಣ್ಣುಮಕ್ಕಳು ಓಡಿ ಹೋಗಬಹುದೆಂಬ ಪೋಷಕರಲ್ಲಿಯ ಭಯ ಇದಕ್ಕೆ ಕಾರಣ ಎಂದು ಬಾಲ್ಯವಿವಾಹ ವಿರೋಧಿ ಹೋರಾಟಗಾರರು ಹೇಳಿದ್ದಾರೆ.
2019ರಿಂದ ಫೆಬ್ರವರಿ 2025ರವರೆಗೆ ಒಡಿಶಾದಾದ್ಯಂತ 8,159 ಬಾಲ್ಯವಿವಾಹಗಳು ನಡೆದಿವೆ ಎನ್ನುವುದನ್ನು ದತ್ತಾಂಶಗಳು ಬಹಿರಂಗಗೊಳಿಸಿವೆ. ಈ ಪೈಕಿ 1,347 ಪ್ರಕರಣಗಳು ನಬರಂಗ್ಪುರ ಜಿಲ್ಲೆಯೊಂದರಿಂದಲೇ ವರದಿಯಾಗಿದ್ದು, ಒಡಿಶಾದ 30 ಜಿಲ್ಲೆಗಳ ಪೈಕಿ ಅಗ್ರಸ್ಥಾನದಲ್ಲಿದೆ.
ಗಂಜಾಂ(966),ಕೋರಾಪತ್(636),ಮಯೂರಭಂಜ್(594),ರಾಯಗಡ(408),ಬಾಲಾಸೋರ್(361),ಕಿಯೊಂಜಾರ್(328),ಕಂಧಮಾಲ್(308) ಮತ್ತು ನಯಾಗಡ(308) ಜಿಲ್ಲೆಗಳು ನಂತರದ ಸ್ಥಾನಗಳಲ್ಲಿವೆ.
ಈ ಆರು ವರ್ಷಗಳಲ್ಲಿ ಅತ್ಯಂತ ಕಡಿಮೆ,57 ಬಾಲ್ಯವಿವಾಹಗಳು ಜಾರ್ಸುಗುಡ ಜಿಲ್ಲೆಯಲ್ಲಿ ನಡೆದಿವೆ.
‘ರಾತ್ರಿ ಬೆಳಗಾಗುವುದರಲ್ಲಿ ಬಾಲ್ಯವಿವಾಹಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ. ಹೆಣ್ಣುಮಕ್ಕಳು ಮತ್ತು ಅವರ ಪೋಷಕರು ಬಾಲ್ಯವಿವಾಹಕ್ಕೆ ಮುಂದಾಗದಿರುವಂತಹ ವಾತಾವರಣವನ್ನು ಮತ್ತು ಸಮಾಜವನ್ನು ನಾವು ಸೃಷ್ಟಿಸಬೇಕಿದೆ. ಅಪ್ರಾಪ್ತ ವಯಸ್ಕ ಮಕ್ಕಳ ಮದುವೆಯನ್ನು ಮಾಡುವುದು ಬುಡಕಟ್ಟು ಜನರಲ್ಲಿ,ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ ಸಾಂಪ್ರದಾಯಿಕ ಪದ್ಧತಿಯಾಗಿದೆ’ ಎಂದು ಹೇಳಿದ ಸಾಮಾಜಿಕ ಕಾರ್ಯಕರ್ತೆ ನಮ್ರತಾ ಛಡ್ಡಾ ಅವರು, ಜೀವನೋಪಾಯಕ್ಕಾಗಿ ಇತರ ಸ್ಥಳಗಳಿಗೆ ವಲಸೆ ಹೋಗುವ ಪೋಷಕರೂ ತಮ್ಮ ಹೆಣ್ಣುಮಕ್ಕಳು ಯಾರೊಂದಿಗಾದರೂ ಓಡಿ ಹೋಗಿ ಕುಟುಂಬಕ್ಕೆ ಅವಮಾನವನ್ನುಂಟು ಮಾಡಬಹುದು ಎಂಬ ಭೀತಿಯಿಂದ ತಮ್ಮ ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರಗೊಳಿಸಲು ಮತ್ತು ಅವರ ಸುರಕ್ಷತೆಗಾಗಿ ಕಾನೂನುಬದ್ಧ ವಯಸ್ಸು ತಲುಪುವ ಮೊದಲೇ ಅವರ ಮದುವೆಯನ್ನು ಮಾಡುತ್ತಾರೆ ಎಂದು ಹೇಳಿದರು.
ಹೆಣ್ಣಿಗೆ ಹೆಚ್ಚು ವಯಸ್ಸಾದಂತೆ ವರದಕ್ಷಿಣೆ ಬೇಡಿಕೆಯೂ ಹೆಚ್ಚುತ್ತದೆ. ಹೀಗಾಗಿ ವರದಕ್ಷಿಣೆಯೂ ಬಾಲ್ಯವಿವಾಹಗಳಿಗೆ ಕಾರಣವಾಗಿದೆ ಎಂದು ಹೇಳಿದ ಅವರು, ‘ಹೆಣ್ಣುಮಕ್ಕಳನ್ನು ಸ್ವೋದ್ಯೋಗಿಗಳಾಗಿಸಲು, ತಮ್ಮ ವಿವಾಹದ ಬಗ್ಗೆ ಯೋಚಿಸದಂತೆ ಮಾಡಲು ಅವರಿಗೆ ಸೂಕ್ತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಒದಗಿಸಲು ನಮಗೆ ಸಾಧ್ಯವಾದರೆ ಮಾತ್ರ ಈ ಪಿಡುಗು ಅಂತ್ಯಗೊಳ್ಳಬಹುದು’ ಎಂದರು.
ಒಡಿಶಾ ಸರಕಾರವು ಬಾಲ್ಯವಿವಾಹಗಳನ್ನು ನಿಲ್ಲಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ಪಂಚಾಯತ್, ಬ್ಲಾಕ್ ಮತ್ತು ಅಂಗನವಾಡಿ ಮಟ್ಟಗಳಲ್ಲಿ ಜಾಗ್ರತಿ ಅಭಿಯಾನಗಳು ಸೇರಿದಂತೆ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.
ಬಾಲ್ಯವಿವಾಹದ ಜೊತೆಗೆ ಬಾಲಕಾರ್ಮಿಕ ಸವಾಲನ್ನೂ ಒಡಿಶಾ ಸರಕಾರವು ಎದುರಿಸುತ್ತಿದ್ದು, ಕಳೆದ ಆರು ವರ್ಷಗಳಲ್ಲಿ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದ 328 ಮಕ್ಕಳನ್ನು ರಕ್ಷಿಸಲಾಗಿದೆ.