ಕಲ್ಲಿದ್ದಲು ಹಗರಣ: ಉಕ್ಕು ಸಚಿವಾಲಯದ ಮಾಜಿ ಅಧಿಕಾರಿಗೆ ಮೂರು ವರ್ಷಗಳ ಜೈಲು ಶಿಕ್ಷೆ

Update: 2023-08-22 15:43 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಛತ್ತೀಸಗಡದ ಕಲ್ಲಿದ್ದಲು ನಿಕ್ಷೇಪದ ಹಂಚಿಕೆಯಲ್ಲಿನ ಅವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಉಕ್ಕು ಸಚಿವಾಲಯದ ಮಾಜಿ ಅಧಿಕಾರಿ ಗೌತಮ ಕುಮಾರ ಬಸಕ್ ಅವರಿಗೆ ದಿಲ್ಲಿಯ ನ್ಯಾಯಾಲಯವೊಂದು ಮಂಗಳವಾರ ಮೂರು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ.

ಇದು ಕಲ್ಲಿದ್ದಲು ಹಗರಣದಲ್ಲಿ ವಿಧಿಸಲಾದ ೧೪ನೇ ಶಿಕ್ಷೆಯಾಗಿದೆ. ಉಕ್ಕು ಸಚಿವಾಲಯದ ಜೆಪಿಸಿ (ಜಂಟಿ ಸ್ಥಾವರ ಸಮಿತಿ)ಯ ಮಾಜಿ ಕಾರ್ಯಕಾರಿ ಕಾರ್ಯದರ್ಶಿ ಬಸಕ್ ಅವರು ವಿಜಯ ಸೆಂಟ್ರಲ್ ಕಲ್ಲಿದ್ದಲು ಬ್ಲಾಕ್‌ನ ಹಂಚಿಕೆಯಲ್ಲಿ ಭ್ರಷ್ಟಾಚಾರವನ್ನು ನಡೆಸಿದ್ದನ್ನು ಎತ್ತಿ ಹಿಡಿದಿರುವ ವಿಶೇಷ ನ್ಯಾಯಾಧೀಶ ಅರುಣ ಭಾರದ್ವಾಜ್ ಅವರು ಐದು ಲ.ರೂ.ಗಳ ದಂಡವನ್ನು ವಿಧಿಸಿದ್ದಾರೆ.

೨೦೦೭,ಜನವರಿಯಲ್ಲಿ ಕಲ್ಲಿದ್ದಲು ಬ್ಲಾಕ್‌ಗಾಗಿ ಅರ್ಜಿ ಸಲ್ಲಿಸಿದ್ದ ಪ್ರಕಾಶ ಇಂಡಸ್ಟ್ರೀಸ್ ಲಿ. ತನ್ನ ಸಾಮರ್ಥ್ಯ ಕುರಿತು ಸುಳ್ಳು ಮಾಹಿತಿಗಳನ್ನು ಒದಗಿಸಿತ್ತು ಎಂದು ಆರೋಪಿಸಲಾಗಿತ್ತು. ಆರೋಪದ ಸತ್ಯಾಸತ್ಯತೆಯನ್ನು ಖಚಿತಪಡಿಸುವಂತೆ ಉಕ್ಕು ಸಚಿವಾಲಯವು ಬಸಕ್ ಅವರಿಗೆ ಆದೇಶಿಸಿತ್ತು. ೨೦೦೮ರಲ್ಲಿ ಬಸಕ್ ಕಂಪನಿಯು ಸಲ್ಲಿಸಿದ್ದ ಹೇಳಿಕೆಗಳನ್ನು ಬೆಂಬಲಿಸಿ ಸುಳ್ಳು ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಿದ್ದರು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.

ದಿಲ್ಲಿ ಉಚ್ಚ ನ್ಯಾಯಾಲಯವು ಈ ಹಿಂದೆ ಕಂಪನಿ ಮತ್ತು ಅದರ ನಿರ್ದೇಶಕನನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಉಚ್ಚ ನ್ಯಾಯಾಲಯದ ಆದೇಶ ವಿರುದ್ಧ ಸಿಬಿಐ ಸಲ್ಲಿಸಿರುವ ಮೇಲ್ಮನವಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News