ತಟ ರಕ್ಷಣಾ ಪಡೆ ಹೆಲಿಕಾಪ್ಟರ್ ಪತನ | ಇಬ್ಬರು ಸಿಬ್ಬಂದಿ ಮೃತದೇಹ ಪತ್ತೆ
ಪೋರ್‌ಬಂದರ್ : ಭಾರತೀಯ ತಟ ರಕ್ಷಣಾ ಪಡೆ (ಐಸಿಜಿ) ಹೆಲಿಕಾಪ್ಟರ್ ಗುಜರಾತ್ ಕರಾವಳಿಯ ಅರಬ್ಬೀ ಸಮುದ್ರದಲ್ಲಿ ಪತನಗೊಂಡ ಬಳಿಕ ನಾಪತ್ತೆಯಾದ ಮೂವರು ಸಿಬ್ಬಂದಿಯಲ್ಲಿ ಓರ್ವ ಪೈಲೆಟ್ ಹಾಗೂ ಮುಳುಗುಗಾರನ ಮೃತದೇಹ ಪತ್ತೆಯಾಗಿದೆ. ಮೂರನೇ ಪೈಲಟ್ ಇದುವರೆಗೆ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಕಮಾಂಡೆಂಟ್ ವಿಪಿನ್ ಬಾಬು ಹಾಗೂ ಮುಳುಗುಗಾರ ಕರಣ್ ಸಿಂಗ್ ಅವರ ಮೃತದೇಹಗಳು ಮಂಗಳವಾರ ರಾತ್ರಿ ಪತ್ತೆಯಾಗಿವೆ. ಇನ್ನೋರ್ವ ಪೈಲಟ್ ರಾಕೇಶ್ ರಾಣಾನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ತಟ ರಕ್ಷಣಾ ಪಡೆಯ ವಕ್ತಾರ ಅಮಿತ್ ಉನಿಯಲ್ ತಿಳಿಸಿದ್ದಾರೆ.
‘‘ಭಾರತೀಯ ತಟ ರಕ್ಷಣಾ ಪಡೆಯ ಅತ್ಯಾಧುನಿಕ ಲಘು ಹೆಲಿಕಾಪ್ಟರ್ (ಎಎಲ್‌ಎಚ್)ನಲ್ಲಿ ಒಟ್ಟು ನಾಲ್ವರು ಸಿಬ್ಬಂದಿ ಇದ್ದರು. ಅಪಘಾತ ಸಂಭವಿಸಿದ ಕೂಡಲೇ ಮುಳುಗುಗಾರ ಗೌತಮ್ ಕುಮಾರ್ ಅವರನ್ನು ರಕ್ಷಿಸಲಾಗಿತ್ತು. ಉಳಿದ ಮೂವರಾದ ಓರ್ವ ಪೈಲಟ್ ಹಾಗೂ ಇಬ್ಬರು ಮುಳುಗುಗಾರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿತ್ತು.
‘‘ಮಂಗಳವಾರ ರಾತ್ರಿ ಪೈಲಟ್ ವಿಪಿನ್ ಬಾಬು ಹಾಗೂ ಮುಳುಗುಗಾರ ಕರಣ್ ಸಿಂಗ್ ಅವರ ಮೃತದೇಹ ಪತ್ತೆಯಾಗಿವೆ. ಇನ್ನೋರ್ವ ಮುಳುಗುಗಾರ ರಾಕೇಶ್ ರಾಣಾ ನಾಪತ್ತೆಯಾಗಿದ್ದಾರೆ. ಅವರನ್ನು ಪತ್ತೆ ಹಚ್ಚಲು ನಾವು ನಾಲ್ಕು ಹಡಗುಗಳು ಹಾಗೂ ಹೆಲಿಕಾಪ್ಟರ್ ಅನ್ನು ನಿಯೋಜಿಸಿದ್ದೇವೆ. ಹೆಲಿಕಾಪ್ಟರ್‌ನ ಅವಶೇಷಗಳು ಪತ್ತೆಯಾಗಿವೆ’’ ಎಂದು ಅವರು ತಿಳಿಸಿದ್ದಾರೆ.
ಪೋರ್‌ಬಂದರ್ ಸಮೀಪ ಸಾಗುತ್ತಿದ್ದ ಟ್ಯಾಂಕರ್‌ನಲ್ಲಿದ್ದ ಗಾಯಗೊಂಡ ಸಿಬ್ಬಂದಿಯನ್ನು ತೆರವುಗೊಳಿಸಲು ಭಾರತೀಯ ತಟ ರಕ್ಷಣಾ ಪಡೆ ಸೋಮವಾರ ರಾತ್ರಿ 11 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ಬಳಿಕ ಈ ಘಟನೆ ನಡೆದಿದೆ.
ಈ ನಡುವೆ ಸಮುದ್ರದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾದ ಬಳಿಕ ಪೋರ್‌ಬಂದರ್‌ನ ನವಿ ಬಂದರ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ರಾತ್ರಿ ಆಕಸ್ಮಿಕ ಸಾವು ಪ್ರಕರಣ ದಾಖಲಿಸಲಾಗಿದೆ.
ಸಮುದ್ರ ಮಧ್ಯ ವೈದ್ಯಕೀಯ ತುರ್ತು ರಕ್ಷಣಾ ಕಾರ್ಯಾಚರಣೆ ಸಂದರ್ಭ ದಡದಿಂದ ಸುಮಾರು 30 ನಾವಿಕ ಮೈಲು ದೂರದಲ್ಲಿ ನಾಲ್ವರು ಸಿಬ್ಬಂದಿಯಿದ್ದ ತಟ ರಕ್ಷಣಾ ಪಡೆಯ ಹೆಲಿಕಾಪ್ಟರ್ ಪತನಗೊಂಡಿತು ಎಂದು ವರದಿ ಹೇಳಿದೆ.