ಲಾರೆನ್ಸ್ ಬಿಷ್ಣೋಯಿ ʼಟಾರ್ಗೆಟ್ ಲಿಸ್ಟ್ʼ ನಲ್ಲಿ ಕಾಮಿಡಿಯನ್ ಮುನವ್ವರ್ ಫಾರೂಕಿ!
ಮುಂಬೈ: ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಹಿಟ್ ಲಿಸ್ಟ್‌ನಲ್ಲಿ ಸಿನಿಮಾ ಉದ್ಯಮ, ರಾಜಕೀಯ ಹಾಗೂ ಇನ್ನಿತರ ವರ್ಗದ ಖ್ಯಾತನಾಮರಿರುವುದು ಬಯಲಾಗಿದೆ. ಕಳೆದ ಒಂದು ದಶಕದಿಂದ ಜೈಲಿನಲ್ಲಿದ್ದರೂ, ತನ್ನ ಕ್ರಿಮಿನಲ್ ಚಟುವಟಿಕೆಗಳನ್ನು ವಿವಿಧ ಜೈಲುಗಳಿಂದ ಮುಂದುವರಿಸುವುದರಲ್ಲಿ ಲಾರೆನ್ಸ್ ಬಿಷ್ಣೋಯಿ ಯಶಸ್ವಿಯಾಗಿದ್ದಾನೆ.
ಸದ್ಯ ಲಾರೆನ್ಸ್ ಬಿಷ್ಣೋಯಿಯನ್ನು ಗುಜರಾತ್‌ನ ಸಾಬರಮತಿ ಜೈಲಿನಲ್ಲಿಡಲಾಗಿದ್ದು, ಮಹಾರಾಷ್ಟ್ರ ಮಾಜಿ ಸಚಿವ ಹಾಗೂ ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣದಲ್ಲಿನ ಆತನ ಕೈವಾಡದ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದರ ಬೆನ್ನಿಗೇ ಲಾರೆನ್ಸ್ ಬಿಷ್ಣೋಯಿ ಗುಂಪಿನ ಹಿಟ್ ಲಿಸ್ಟ್‌ನಲ್ಲಿರುವ ಖ್ಯಾತನಾಮರ ಹೆಸರು ಬಯಲಾಗಿದೆ. ಈ ಹಿಟ್ ಲಿಸ್ಟ್‌ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅಗ್ರಸ್ಥಾನದಲ್ಲಿದ್ದು, 1988ರಲ್ಲಿ ರಾಜಸ್ಥಾನದಲ್ಲಿ 'ಹಮ್ ಸಾಥ್ ಸಾಥ್ ಹೈಂ' ಚಿತ್ರದ ಚಿತ್ರೀಕರಣ ನಡೆಯುವಾಗ ಸಲ್ಮಾನ್ ಖಾನ್ ಬಿಷ್ಣೋಯಿ ಸಮುದಾಯದ ಪಾಲಿಗೆ ಆರಾಧನೀಯ ಪ್ರಾಣಿಯಾಗಿರುವ ಕೃಷ್ಣಮೃಗವನ್ನು ಕೊಂದ ಆರೋಪಕ್ಕೆ ಗುರಿಯಾಗಿದ್ದರು.
ಲಾರೆನ್ಸ್ ಬಿಷ್ಣೋಯಿ ಗುಂಪಿನ ಹಿಟ್ ಲಿಸ್ಟ್‌ನಲ್ಲಿ ಮತ್ತೊಬ್ಬ ಜನಪ್ರಿಯ ವ್ಯಕ್ತಿ ಮುಂಬೈ ಮೂಲದ ಕಾಮಿಡಿಯನ್ ಮುನವ್ವರ್ ಫಾರೂಕಿ. ಕಳೆದ ತಿಂಗಳು ಅವರನ್ನು ದಿಲ್ಲಿಯಲ್ಲಿ ಹತ್ಯೆಗೈಯ್ಯುವ ವಿಫಲ ಪ್ರಯತ್ನವೂ ನಡೆದಿತ್ತು.
ಇವರೊಂದಿಗೆ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ಝೀಶನ್ ಸಿದ್ದೀಕಿ ಹಾಗೂ ಬಿಷ್ಣೋಯಿ ಗುಂಪಿನ ಗುಂಡೇಟಿಗೆ ಬಲಿಯಾಗಿದ್ದ ಗಾಯಕ ಸಿಧು ಮೂಸೆವಾಲಾರ ವೃತ್ತಿ ಬದುಕನ್ನು ರೂಪಿಸಿದ್ದ ಶಗನ್‌ಪ್ರೀತ್ ಸಿಂಗ್ ಕೂಡಾ ಬಿಷ್ಣೋಯಿ ಗುಂಪಿನ ಹಿಟ್ ಲಿಸ್ಟ್‌ನಲ್ಲಿರುವುದು ಬಯಲಾಗಿದೆ ಎಂದು Times of India ವರದಿ ಮಾಡಿದೆ.