ದಲಿತ ಬಾಲಕನಿಗೆ ಥಳಿತ; ಬಲವಂತದಿಂದ ಕೈಯಿಂದಲೇ ಮಲತೆಗೆಸಿ ದೌರ್ಜನ್ಯ
ಲಕ್ನೋ: ಅಪ್ರಾಪ್ತ ವಯಸ್ಸಿನ ದಲಿತ ಬಾಲಕನೊಬ್ಬನನ್ನು ಹಿಗ್ಗಾಮುಗ್ಗಾ ಥಳಿಸಿ, ಆತನಿಗೆ ಬಲವಂತವಾಗಿ ಮಲವನ್ನು ಕೈಯಿಂದಲೇ ತೆಗೆಸಿದ ಅಮಾನವೀಯ ಘಟನೆ ಉತ್ತರಪ್ರದೇಶದ ಇಟಾವಾ ಜಿಲ್ಲೆಯ ಸೈಫಾಯಿ ಎಂಬಲ್ಲಿ ನಡೆದಿದೆ. ಸಂತ್ರಸ್ತ ಬಾಲಕನು 11ನೇ ತರಗತಿಯ ವಿದ್ಯಾರ್ಥಿ ಯಾಗಿದ್ದು, ಜಗರಾಮ್ ಯಾದವ್ ಎಂಬಾತನ ಹೊಲದಲ್ಲಿ ಆತ ಬಹಿರ್ದೆಶೆ ಮಾಡಿದ್ದನು. ಇದರಿಂದ ಕ್ರುದ್ಧನಾದ ಜಗರಾಮ್ ಆತನಿಗೆ ಮನಬಂದಂತೆ ಥಳಿಸಿದ್ದ ಹಾಗೂ ತನ್ನ ಹೊಲದಲ್ಲಿದ್ದ ಮಲವನ್ನು ಬಲವಂತದಿಂದ ಬಾಲಕನ ಕೈಯಿಂದಲೇ ತೆಗೆಸಿದನೆಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.
ಇಟಾವಾ ಜಿಲ್ಲೆಯ ಪರ್ಸಾನಾ ಗ್ರಾಮದಲ್ಲಿ ಜುಲೈ 13ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 15 ವರ್ಷ ವಯಸ್ಸಿನ ತನ್ನ ಪುತ್ರನ ಮೇಲೆ ಜಗರಾಮ್ ಯಾದವ್ ಜಾತಿ ನಿಂದನೆಯನ್ನು ಮಾಡಿದ್ದನೆಂದು ಸಂತ್ರಸ್ತನ ತಂದೆ ಎಫ್ಐಆರ್ ನಲ್ಲಿ ಆರೋಪಿಸಿದ್ದಾರೆ. ಬಾಲಕನಿಗೆ ಹಲ್ಲೆ ನಡೆಸಿದ್ದಕ್ಕೆ ವಿರೋಧಿಸಿದವರ ಮೇಲೆಯೂ ಜಗರಾಮ್ ಹಲ್ಲೆ ನಡೆಸಿದ್ದಾನೆಂದು ಅವರು ದೂರಿದ್ದಾರೆ. ಸಮೀಪದ ಹೊಲದಲ್ಲಿ ದುಡಿಯುತ್ತಿದ್ದ ಬಾಲಕನ ಚಿಕ್ಕಮ್ಮ, ಆತನ ರಕ್ಷಣೆ ಯತ್ನಿಸಿದಾಗ ಆಕೆಯ ಮೇಲೂ ಜಗರಾಮ್ ಹಲ್ಲೆ ನಡೆಸಿದ್ದಾನೆಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.
ಪರಿಶಿಷ್ಟ ಜಾತಿ ಹಾಗೂ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆಯೆಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಗ್ರಾಮಾಂತರ) ಸತ್ಯಪಾಲ್ ಸಿಂಗ್ ತಿಳಿಸಿದ್ದಾರೆ. ಸೈಫಾಯ್ ವೃತ್ತ ನಿರೀಕ್ಷಕ ನಾಗೇಂದ್ರ ಚುಬೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆಂದು ಅವರು ಹೇಳಿದರು.
ಪ್ರಕರಣದ ಆರೋಪಿ ಜಗರಾಮ್ ಯಾದವ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ’’ ಎಂದು ಸತ್ಯಪಾಲ್ ಸಿಂಗ್ ತಿಳಿಸಿದರು.