ಕ್ರಿಕೆಟ್ ಪಂದ್ಯದ ವೇಳೆ ವಾಗ್ವಾದ: ದಲಿತ ಯುವಕನನ್ನು ಥಳಿಸಿ, ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ ದುಷ್ಕರ್ಮಿಗಳು

Update: 2024-01-17 08:12 GMT

ಸಾಂದರ್ಭಿಕ ಚಿತ್ರ (PTI)

ಲಕ್ನೊ: ಕ್ರಿಕೆಟ್ ಪಂದ್ಯದ ವೇಳೆ ಉಂಟಾದ ಮಾತಿನ ಚಕಮಕಿಯು ನಂತರ ಘರ್ಷಣೆಗೆ ತಿರುಗಿದ್ದರಿಂದ, 18 ವರ್ಷದ ದಲಿತ ಯುವಕನನ್ನು ಥಳಿಸಿರುವ ಗುಂಪೊಂದು, ಆತನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಘಟನೆಯು ಜನವರಿ 13ರಂದೇ ನಡೆದಿದ್ದರೂ, ದಿನಗೂಲಿ ನೌಕರರಾದ ಸಂತ್ರಸ್ತ ಯುವಕನ ತಂದೆಯಾದ ಸಂದೀಪ್ ಕುಮಾರ್ ರಾವತ್ ಈ ಸಂಬಂಧ ದೂರು ನೀಡಿದ ನಂತರ ಮಂಗಳವಾರ ಪ್ರಾಥಮಿಕ ಮಾಹಿತಿ ವರದಿಯನ್ನು ದಾಖಲಿಸಿಕೊಳ್ಳಲಾಗಿದೆ.

ಮುಖ್ಯ ಆರೋಪಿಯನ್ನು ಫರ್ದೀನ್ ಎಂದು ಗುರುತಿಸಲಾಗಿದ್ದು, ಆತನೊಂದಿಗೆ ಆತನ ಇನ್ನಿತರ 25-30 ಸಹಚರರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 506 (ಕ್ರಿಮಿನಲ್ ಬೆದರಿಕೆ), 504 (ಅವಮಾನ), 323 (ಸ್ವಯಂಪ್ರೇರಿತ ಹಲ್ಲೆ) ಹಾಗೂ 147 (ಗಲಭೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

“ಮೆಕಾನಿಕ್ ಆಗಿರುವ ನನ್ನ 18 ವರ್ಷದ ಪುತ್ರ ಲಕ್ಕಿ ತನ್ನ ಗೆಳೆಯರೊಂದಿಗೆ ಖುರ್ರಮ್ ನಗರದಲ್ಲಿ ಕ್ರಿಕೆಟ್ ಆಡಲು ತೆರಳಿದ್ದ. ಪಂದ್ಯದ ವೇಳೆ ಆಟಗಾರನೊಬ್ಬ ದೊಡ್ಡ ಹೊಡೆತ ಹೊಡೆದಿದ್ದರಿಂದ, ಚೆಂಡು ಮತ್ತೊಂದು ಯುವಕರ ತಂಡವು ಆಡುತ್ತಿದ್ದ ಪ್ರದೇಶದಲ್ಲಿ ಹೋಗಿ ಬಿದ್ದಿತು. ಲಕ್ಕಿ ಆ ಚೆಂಡನ್ನು ತೆಗೆದುಕೊಳ್ಳಲು ಹೋದಾಗ, ಅಲ್ಲಿ ಆಡುತ್ತಿದ್ದ ಯುವಕರ ತಂಡವು ಆ ಚೆಂಡನ್ನು ಮರಳಿಸಲು ನಿರಾಕರಿಸಿದೆ. ಇದರಿಂದ ಕೂಡಲೇ ಅವರ ನಡುವೆ ಮಾತಿನ ಚಕಮಕಿ ನಡೆದು, ನನ್ನ ಪುತ್ರ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ, ಆತನನ್ನು ತಪ್ಪಿಸಿಕೊಳ್ಳದಂತೆ ಹಿಡಿದುಕೊಂಡಿರುವ ಗುಂಪು, ಆತನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದೆ. ಅವರು ತನ್ನ ಪುತ್ರನ ವಿರುದ್ಧ ಜಾತಿ ನಿಂದನೆ ಬೈಗುಳಗಳನ್ನೂ ಪ್ರಯೋಗಿಸಿದ್ದಾರೆ” ಎಂದು ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚದನ್ ಗ್ರಾಮದ ನಿವಾಸಿ ರಾವತ್ ಪ್ರಾಥಮಿಕ ಮಾಹಿತಿ ವರದಿಯಲ್ಲಿ ಆರೋಪಿಸಿದ್ದಾರೆ.

ಆದರೆ, ನನ್ನ ಪುತ್ರನು ಅಲ್ಲಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿ, ಮನೆಗೆ ಮರಳಿದ. ಆದರೆ, ಘಟನೆಯ ಕುರಿತು ಆತ ಬಹಿರಂಗಪಡಿಸಲಿಲ್ಲ. ಅದೇ ದಿನ ನನ್ನ ಪುತ್ರನನ್ನು ಮತ್ತೆ ಅಡ್ಡಗಟ್ಟಿರುವ ಆ ಯುವಕರ ಗುಂಪು, ಮತ್ತೆ ಆತನ ಮೇಲೆ ಹಲ್ಲೆ ನಡೆಸಿದೆ. ಈ ಬಾರಿ ಆತ ಘಟನೆಯ ಎಲ್ಲ ವಿವರಗಳನ್ನು ನಮ್ಮೊಂದಿಗೆ ಹಂಚಿಕೊಂಡ. ನಾವು ಆ ವಿಷಯವನ್ನು ಚರ್ಚಿಸುತ್ತಿರುವಾಗಲೇ ಮತ್ತೆ ಮನೆಯ ಬಳಿಗೆ ಬಂದ ಆ ಯುವಕರ ಗುಂಪು, ನನ್ನ ಪುತ್ರನನ್ನು ಮನೆಯಿಂದ ಹೊರಗೆ ಎಳೆದೊಯ್ದು, ಮತ್ತೆ ಥಳಿಸಿತು. ಆದರೆ, ನೆರೆಹೊರೆಯವರು ನಮ್ಮ ನೆರವಿಗೆ ಬಂದಿದ್ದರಿಂದ ಆ ಯುವಕರ ಗುಂಪು ಅಲ್ಲಿಂದ ಪರಾರಿಯಾಯಿತು” ಎಂದೂ ರಾವತ್ ದೂರಿದ್ದಾರೆ.

ಮರುದಿನ ತನ್ನ ಸಹೋದರಿಯನ್ನು ಶಾಲೆಯಿಂದ ಮರಳಿ ಕರೆ ತರಲು ಟಕ್ರೋಹಿಗೆ ತೆರಳಿದ್ದ ನನ್ನ ಪುತ್ರನನ್ನು ಆ ಯುವಕರ ಗುಂಪು ಮತ್ತೆ ಕನೌಸಾದಲ್ಲಿ ಅಡ್ಡಗಟ್ಟಿತು. ಆತ ಪ್ರಜ್ಞಾಹೀನನಾಗುವವರೆಗೂ ಥಳಿಸಿರುವ ಆ ಯುವಕರ ಗುಂಪು, ನಂತರ ಆತನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದೆ. ಅಲ್ಲಿಂದ ಆತ ಭಯಭೀತನಾಗಿದ್ದು, ಮನೆಯಿಂದ ಹೊರಗೆ ಕಾಲಿಡುತ್ತಿಲ್ಲ” ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಲಕ್ನೊ ಉತ್ತರ ವಲಯದ ಉಪ ಪೊಲೀಸ್ ಆಯುಕ್ತ ಖಾಸಿಮ್ ಅಬಿದಿ, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದ್ದು, ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News