ತರೂರ್ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಪಡಿಸಲು ದಿಲ್ಲಿ ಹೈಕೋರ್ಟ್ ನಕಾರ

Update: 2024-08-29 20:56 IST
ತರೂರ್ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಪಡಿಸಲು ದಿಲ್ಲಿ ಹೈಕೋರ್ಟ್ ನಕಾರ

ಶಶಿ ತರೂರ್ | PTI 

  • whatsapp icon

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ತಾನು ನೀಡಿರುವ ಹೇಳಿಕೆಯೊಂದಕ್ಕೆ ಸಂಬಂಧಿಸಿ ಬಿಜೆಪಿ ನಾಯಕರೊಬ್ಬರು ಹೂಡಿರುವ ಮಾನನಷ್ಟ ಮೊಕದ್ದಮೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್ ಸಲ್ಲಿಸಿರುವ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಗುರುವಾರ ತಳ್ಳಿಹಾಕಿದೆ.

2018ರಲ್ಲಿ ಬೆಂಗಳೂರು ಸಾಹಿತ್ಯ ಹಬ್ಬದಲ್ಲಿ ಮಾತನಾಡುತ್ತಿದ್ದ ಶಶಿ ತರೂರ್, ‘‘ಮೋದಿ ಶಿವಲಿಂಗದ ಮೇಲೆ ಕುಳಿತಿರುವ ಚೇಳು’’ ಎಂಬುದಾಗಿ ಆರ್‌ಎಸ್‌ಎಸ್ ನಾಯಕರೊಬ್ಬರು ಬಣ್ಣಿಸಿದ್ದಾರೆ ಎಂದು ಹೇಳಿದ್ದರು. ‘‘ಈ ಹೇಳಿಕೆಯು ಅದ್ಭುತ ಹೋಲಿಕೆಯಾಗಿದೆ’’ ಎಂದು ತರೂರ್ ಬಣ್ಣಿಸಿದ್ದರು.

2020 ಅಕ್ಟೋಬರ್ 16ರಂದು ಹೈಕೋರ್ಟ್ ಕ್ರಿಮಿನಲ್ ಮಾನನಷ್ಟ ಕಲಾಪಕ್ಕೆ ತಡೆ ನೀಡಿತ್ತು. ಗುರುವಾರ ತನ್ನ ಮಧ್ಯಂತರ ಆದೇಶವನ್ನು ತೆರವುಗೊಳಿಸಿದ ಹೈಕೋರ್ಟ್ ಸೆಪ್ಟಂಬರ್ 10ರಂದು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಉಭಯ ಪಕ್ಷಗಳಿಗೆ ನಿರ್ದೇಶನ ನೀಡಿತು.

‘‘ಮಾನನಷ್ಟ ಮೊಕದ್ದಮೆಯನ್ನು ರದ್ದುಪಡಿಸುವುದಕ್ಕೆ ಬೇಕಾದ ಆಧಾರಗಳನ್ನು ಒದಗಿಸಲಾಗಿಲ್ಲ’’ ಎಂದು ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂಡಿರಟ್ಟ ಹೇಳಿದರು.

ಬಿಜೆಪಿ ನಾಯಕ ರಾಜೀವ್ ಬಬ್ಬರ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಕಾಂಗ್ರೆಸ್ ನಾಯಕನ ಹೇಳಿಕೆಯಿಂದ ತನ್ನ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿದೆ ಎಂದು ಅವರು ಹೇಳಿದ್ದರು.

2019ರಲ್ಲಿ ಅವರಿಗೆ ವಿಚಾರಣಾ ನ್ಯಾಯಾಲಯವು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಹೊರಡಿಸಿತು.

‘‘ನಾನು ಹೇಳಿರುವ ಮಾತುಗಳನ್ನು ಮೊದಲು ಆಡಿರುವುದು ಗೋರ್ದನ್ ಝಡಫಿಯ. ಅವರು ಆಡಿರುವ ಮಾತುಗಳಿಗಾಗಿ ನನ್ನ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಅವರ ವಿರುದ್ಧ ಬಿಜೆಪಿಯು ದೂರು ದಾಖಲಿಸುತ್ತದೆಯೇ’’ ಎಂದು ತರೂರ್ ಪ್ರಶ್ನಿಸಿದ್ದರು.

‘‘ಉತ್ತರಪ್ರದೇಶದ ಬಿಜೆಪಿ ಉಸ್ತುವಾರಿ ಗೋರ್ದನ್ ಝಡಾಫಿಯರಿಗೆ ಸಮನ್ಸ್ ನೀಡುವಂತೆ ಬಿಜೆಪಿಯು ನ್ಯಾಯಾಧೀಶರನ್ನು ಕೋರುತ್ತದೆಯೇ ಎಂದು ನಾನು ತಿಳಿಯಲು ಬಯಸುತ್ತೇನೆ. ಏಳು ವರ್ಷಗಳಿಂದ ಸಾರ್ವಜನಿಕವಾಗಿ ಲಭ್ಯವಿರುವ ಮಾತುಗಳನ್ನು ಆಡಿರುವುದಕ್ಕೆ ಬಿಜೆಪಿಯು ನನ್ನ ವಿರುದ್ಧ ದೂರು ನೀಡಿರುವುದು ಅಸಂಬದ್ಧ’’ ಎಂದು ತರೂರ್ ‘ಎಕ್ಸ್’ನಲ್ಲಿ ಬರೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News