ಅರುಂಧತಿ ರಾಯ್ ಹಾಗೂ ಡಾ. ಶೇಖ್ ಶೌಕತ್ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನುಮತಿ

Update: 2024-06-14 15:22 GMT
PC : maktoobmedia.com

ಹೊಸದಿಲ್ಲಿ: ಲೇಖಕಿ ಅರುಂಧತಿ ರಾಯ್ ಹಾಗೂ ಕಾಶ್ಮೀರ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಕಾನೂನು ಪ್ರಾಧ್ಯಾಪಕರಾಗಿದ್ದ ಡಾ. ಶೇಖ್ ಶೌಕತ್ ವಿರುದ್ಧ ಯುಎಪಿಎ ಕಾಯ್ದೆ ಹಾಗೂ ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲು ಶುಕ್ರವಾರ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅನುಮತಿ ನೀಡಿದ್ದಾರೆ.

ಕಳೆದ ವರ್ಷ ಈ ಇಬ್ಬರ ವಿರುದ್ಧ ಇದೇ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ/153ಬಿ ಹಾಗೂ 505ರ ಅಡಿ ವಿಚಾರಣೆಗೊಳಪಡಿಸಲು ಅಪರಾಧ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 196ರ ಅಡಿ ಲೆಫ್ಟಿನೆಂಟ್ ಗವರ್ನರ್ ಅನುಮತಿ ನೀಡಿದ್ದರು.

2010ರಲ್ಲಿ ನಡೆದಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಈ ಇಬ್ಬರೂ ಧಾರ್ಮಿಕ ವೈರತ್ವವನ್ನು ಪ್ರಚೋದಿಸಿದ್ದಾರೆ ಹಾಗೂ ಸಾರ್ವಜನಿಕ ಶಾಂತಿಯನ್ನು ಭಂಗಗೊಳಿಸಿದ್ದಾರೆ ಎಂಬ ಆರೋಪದಡಿಯೂ ವಿಚಾರಣೆ ನಡೆಸಲು ಶುಕ್ರವಾರ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಅನುಮತಿ ನೀಡಿದ್ದಾರೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಕ್ಟೋಬರ್ 21, 2010ರಂದು ‘ಆಝಾದಿ – ದಿ ಓನ್ಲಿ ವೇ’ ಭಿತ್ತಿ ಬರಹದಡಿಯಲ್ಲಿ ಕಮಿಟಿ ಫಾರ್ ದಿ ರಿಲೀಸ್ ಆಫ್ ಪೊಲಿಟಿಕಲ್ ಪ್ರಿಸನರ್ಸ್ ಸಂಘಟನೆಯು ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಲಾಗಿದೆ ಎಂದು ಹಲವಾರು ಮಂದಿಯ ವಿರುದ್ಧ ಸುಶೀಲ್ ಪಂಡಿತ್ ದೂರು ದಾಖಲಿಸಿದ್ದರು.

ಸಂಸತ್ ಮೇಲಿನ ದಾಳಿ ಪ್ರಕರಣದಲ್ಲಿ ಖುಲಾಸೆಗೊಂಡು, ಕೆಲ ವರ್ಷಗಳ ಹಿಂದೆ ನಿಧನರಾಗಿದ್ದ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿ ಹಾಗೂ ದಿಲ್ಲಿ ವಿಶ್ವವಿದ್ಯಾಲಯದ ಉಪನ್ಯಾಸಕ ಸೈಯದ್ ಅಬ್ದುಲ್ ರಹಮಾನ್ ಗೀಲಾನಿ ಈ ಪ್ರಕರಣದಲ್ಲಿನ ಮತ್ತಿಬ್ಬರು ಆರೋಪಿಗಳಾಗಿದ್ದಾರೆ.

ಸೌಜನ್ಯ: maktoobmedia.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News