ದಿಲ್ಲಿ-ಸ್ಯಾನ್‌ ಫ್ರಾನ್ಸಿಸ್ಕೋ ವಿಮಾನ 20 ಗಂಟೆ ವಿಳಂಬ: ಏರ್‌ ಇಂಡಿಯಾಗೆ ನೋಟಿಸ್‌

Update: 2024-05-31 11:48 GMT

ಏರ್‌ ಇಂಡಿಯಾ | PC: X\ @airindia

ಹೊಸದಿಲ್ಲಿ: ದಿಲ್ಲಿ-ಸ್ಯಾನ್‌ ಫ್ರಾನ್ಸಿಸ್ಕೋ ವಿಮಾನಯಾನ ಆರಂಭಕ್ಕೆ ಉಂಟಾದ 20 ಗಂಟೆ ವಿಳಂಬದ ಕುರಿತಂತೆ ನಾಗರಿಕ ವಾಯುಯಾನ ಸಚಿವಾಲಯವು ಏರ್‌ ಇಂಡಿಯಾಗೆ ನೋಟಿಸ್‌ ಜಾರಿ ಮಾಡಿದೆ.

ವಿಮಾನ ವಿಳಂಬದಿಂದಾಗಿ ಪ್ರಯಾಣಿಕರು ಏರೋಬ್ರಿಡ್ಜ್‌ ಕಾರಿಡಾರ್‌ನಲ್ಲಿ ಉಳಿದುಕೊಂಡಿರುವುದು ಹಾಗೂ ಹವಾನಿಯಂತ್ರಣವಿಲ್ಲದೆ ಹಲವರು ವಿಮಾನದೊಳಗೆ ಪ್ರಜ್ಞೆತಪ್ಪಿರುವ ಕುರಿತಾದ ದೂರುಗಳ ನಂತರ ಸಚಿವಾಲಯದ ನೋಟಿಸ್‌ ಬಂದಿದೆ. ಈ ವಿದ್ಯಮಾನದ ವೀಡಿಯೋಗಳೂ ಸಾಕಷ್ಟು ಮಂದಿಯ ಆಕ್ರೋಶಕ್ಕೆ ಕಾರಣವಾಗಿತ್ತು.

ವಿಮಾನದ ಹಾರಾಟವು “ಕಾರ್ಯನಿರ್ವಹಣಾತ್ಮಕ ಕಾರಣಗಳಿಂದ” ವಿಳಂಬಗೊಂಡಿತ್ತೆಂದು ಹೇಳಲಾಗಿದೆ. ಆದರೆ ಈ ಸಮಸ್ಯೆ ಪರಿಹಾರಗೊಳ್ಳುತ್ತಿದ್ದಂತೆ ಫ್ಲೈಟ್‌ ಡ್ಯೂಟಿ ಸಮಯ ಮಿತಿಗಳು ಆರಂಭಗೊಂಡಿತ್ತೆಂದು ತಿಳಿದು ಬಂದಿದೆ.

ರಾಜಧಾನಿಯಲ್ಲಿ ತಾಪಮಾನ ವಿಪರೀತ ಏರಿಕೆಯಾಗುತ್ತಿರುವುದು ತಿಳಿದಿದ್ದರೂ ವಿಮಾನ ವಿಳಂಬದಿಂದ ಪ್ರಯಾಣಿಕರಿಗಾಗುತ್ತಿದ್ದ ಅನಾನುಕೂಲತೆಗಳನ್ನು ಕಡಿಮೆ ಮಾಡಲು ಕ್ರಮವೇಕೆ ಕೈಗೊಳ್ಳಲಾಗಿಲ್ಲ ಎಂದು ಸಚಿವಾಲಯ ಏರ್‌ ಇಂಡಿಯಾವನ್ನು ಪ್ರಶ್ನಿಸಿ ಅದಕ್ಕೆ ಉತ್ತರವನ್ನು ಬಯಸಿದೆ.

ಎಐ 183 ವಿಮಾನದಲ್ಲಿ ಸುಮಾರು 200 ಪ್ರಯಾಣಿಕರಿದ್ದರು. ಗುರುವಾರ ಅಪರಾಹ್ನ 3.30ಕ್ಕೆ ವಿಮಾನ ಹೊರಡಬೇಕಿತ್ತು. ಆದರೆ ಸಮಯ ಮರುನಿಗದಿಗೊಳ್ಳುವಷ್ಟರ ಹೊತ್ತಿಗೆ ಆರು ಗಂಟೆ ವಿಳಂಬವಾಗಿತ್ತು.

ತಾಂತ್ರಿಕ ಕಾರಣವೆಂದು ಹೇಳಿ ಮೊದಲು ಪ್ರಯಾಣಿಕರನ್ನು ಬೇರೊಂದು ವಿಮಾನ ಏರುವಂತೆ ಮಾಡಲಾಯಿತು. ಆದರೆ ಆ ವಿಮಾನದಲ್ಲಿ ಹವಾನಿಯಂತ್ರಣ ವ್ಯವಸ್ಥೆ ಕಾರ್ಯನಿರ್ವಹಿಸದೇ ಇದ್ದುದರಿಂದ ಕೆಲವು ಪ್ರಯಾಣಿಕರು ಪ್ರಜ್ಞೆ ಕಳೆದುಕೊಂಡರು. ಹಲವಾರು ಹಿರಿ ನಾಗರಿಕರು ಮತ್ತು ಮಕ್ಕಳು ವಿಮಾನದಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News