ತಮಿಳುನಾಡು ಕರಾವಳಿಗೆ ಅಪ್ಪಳಿಸಿದ ಫೆಂಗಲ್: ನಾಲ್ವರು ಮೃತ್ಯು
ಚೆನ್ನೈ: ಫೆಂಗಲ್ ಚಂಡಮಾರುತ ತಮಿಳುನಾಡು ಕರಾವಳಿಗೆ ಅಪ್ಪಳಿಸಿದ್ದು, ಭಾರಿ ಮಳೆ ಮತ್ತು ಮಳೆ ಸಂಬಂಧಿ ಅನಾಹುತಗಳಿಂದ ಚೆನ್ನೈ ನಗರದ ವಿವಿಧೆಡೆ ನಾಲ್ವರು ಜೀವ ಕಳೆದುಕೊಂಡಿದ್ದಾರೆ. ಶನಿವಾರ ಚೆನ್ನೈ ನಗರದ ವಿವಿಧೆಡೆಗಳಲ್ಲಿ 4 ಸೆಂಟಿಮೀಟರ್ನಿಂದ 13 ಸೆಂಟಿ ಮೀಟರ್ವರೆಗೂ ಮಳೆ ಬಿದ್ದಿದ್ದು, ವಿದ್ಯುತ್ ಸ್ಪರ್ಶದಿಂದ ನಾಲ್ವರು ಮೃತಪಟ್ಟಿದ್ದಾರೆ.
ಶನಿವಾರ ರಾತ್ರಿ 10.30ರ ವೇಳೆಗೆ ಚಂಡಮಾರುತ ಪುದುಚೇರಿ ಬಳಿ ತಮಿಳುನಾಡು ಕರಾವಳಿಯನ್ನು ದಾಟಿದೆ. ಹವಾಮಾನ ವ್ಯವಸ್ಥೆಯಲ್ಲಿ ಮತ್ತಷ್ಟು ಮಳೆ ನಿರೀಕ್ಷಿಸಲಾಗಿದ್ದು, ಒಳನಾಡಿಗೆ ಚಂಡಮಾರಉತ ಪ್ರವೇಶಿಸುವುದರಿಂದ ನಗರದ ಪಕ್ಕದ ಮೂರು ಜಿಲ್ಲೆಗಳು ಸೇರಿದಂತೆ 13 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಈ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ವಿಳ್ಳುಪುರಂ, ಕಲ್ಲಕುರಿಚಿ ಮತ್ತು ಗುಡಲೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ತಮಿಳುನಾಡು ಮತ್ತು ಪುದುಚೇರಿ ಕರಾವಳಿಗಳನ್ನು ದಾಟಿರುವ ಫೆಂಗಲ್ ಚಂಡಮಾರುತ, ತೀವ್ರ ವಾಯುಭಾರಕುಸಿತವಾಗಿ ದುರ್ಬಲಗೊಳ್ಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಪಶ್ಚಿಮ ಮತ್ತು ನೈರುತ್ಯ ದಿಕ್ಕಿನಲ್ಲಿ ಚಲಿಸಿ ಮುಂದಿನ ಕೆಲ ಗಂಟೆಗಳಲ್ಲಿ ವಾಯುಭಾರ ಕುಸಿತವಾಗಿ ದುರ್ಬಲಗೊಳ್ಳಲಿದೆ. ಸುಮಾರು 70-80 ಕಿಲೋಮೀಟರ್ ವೇಗದಲ್ಲಿ ಬೀಸಿದ ಗಾಳಿ ಶನಿವಾರ ರಾತ್ರಿ 11.30ರ ವೇಳೆಗೆ ತಮಿಳುನಾಡು ದಾಟಿದೆ ಎಂದು ಸ್ಪಷ್ಟಪಡಿಸಿದೆ.
ಶನಿವಾರದಿಂದ ಭಾರಿ ಮಳೆಯ ಕಾರಣ ರದ್ದಾಗಿದ್ದ ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಸೇವೆ ಭಾನುವಾರ ಮುಂಜಾನೆ 4.00 ಗಂಟೆ ವೇಳೆಗೆ ಪುನರಾರಂಭವಾಗಿದೆ.