"ಸ್ವಾತಂತ್ರ್ಯದ ಬೆಳಗಿನ ಮೊದಲ ಚಹಾ": ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮನೀಶ್ ಸಿಸೋಡಿಯಾ ಟ್ವೀಟ್

Update: 2024-08-10 13:12 GMT

ಮನೀಶ್ ಸಿಸೋಡಿಯ  | PC : X \ @msisodia

ಹೊಸದಿಲ್ಲಿ: 17 ತಿಂಗಳ ಸೆರೆವಾಸದ ನಂತರ ತಿಹಾರ್ ಜೈಲಿನಿಂದ ಹೊರ ಬಂದಿರುವ ದಿಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ, “ಸ್ವಾತಂತ್ರ್ಯದ ಬೆಳಗಿನ ಮೊದಲ ಚಹಾ” ಎಂಬ ಶೀರ್ಷಿಕೆಯೊಂದಿಗೆ ತಮ್ಮ ಪತ್ನಿಯೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಮನೀಶ್ ಸಿಸೋಡಿಯಾರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ ನಂತರ, ಅದೇ ದಿನ ಸಂಜೆ ಅವರು ತಿಹಾರ್ ಜೈಲಿನಿಂದ ಬಿಡುಗಡೆಗೊಂಡಿದ್ದರು.

ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರವೊಂದನ್ನು ಹಂಚಿಕೊಂಡಿರುವ ಅವರು, “ಸ್ವಾತಂತ್ರ್ಯದ ಬೆಳಗಿನ ಮೊದಲ ಚಹಾ.. 17 ತಿಂಗಳ ನಂತರ! ಸಂವಿಧಾನವು ನೀಡಿರುವ ಸ್ವಾತಂತ್ರ್ಯವು ನಮ್ಮೆಲ್ಲ ಭಾರತೀಯರಿಗೆ ನೀಡಿರುವ ಬದುಕುವ ಹಕ್ಕಿನ ಖಾತ್ರಿಯಾಗಿದೆ” ಎಂದು ಬರೆದುಕೊಂಡಿದ್ದಾರೆ.

ಇನ್ನು ಕೆಲವೇ ತಿಂಗಳಲ್ಲಿ ಹರ್ಯಾಣದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಹಾಗೂ ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ದಿಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಲು ದಿಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರಿಗೆ ದೊರೆತಿರುವ ಜಾಮೀನು ಆಮ್ ಆದ್ಮಿ ಪಕ್ಷದ ಪಾಲಿಗೆ ಒಂದು ಆಯುಧವಾಗಿ ಒದಗಿ ಬಂದಿದೆ.

ಆಮ್ ಆದ್ಮಿ ಪಕ್ಷಕ್ಕೆ ಕಳಂಕ ಹಚ್ಚುವ ಪಿತೂರಿಗೆ ಸಿಸೋಡಿಯಾರ ಬಿಡುಗಡೆಯು ದೊಡ್ಡ ಹೊಡೆತ ನೀಡಿದೆ ಎಂದು ಪಕ್ಷದ ನಾಯಕರು ಪ್ರತಿಪಾದಿಸಿದ್ದಾರೆ.

ಫೆಬ್ರವರಿ 26, 2023ರಂದು ದಿಲ್ಲಿ ಅಬಕಾರಿ ನೀತಿ ಪ್ರಕರಣದ ಸಂಬಂಧ ಕೇಂದ್ರೀಯ ತನಿಖಾ ದಳ (ಸಿಬಿಐ) ಮನೀಶ್ ಸಿಸೋಡಿಯಾರನ್ನು ಬಂಧಿಸಿತ್ತು. ಇದಾದ ಕೇವಲ ಎರಡು ವಾರಕ್ಕೂ ಮುನ್ನವೇ ಅವರನ್ನು ಜಾರಿ ನಿರ್ದೇಶನಾಲಯ ಕೂಡಾ ಬಂಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News