ಹಾಲು, ಹೈನೋತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆಗಳನ್ನು ಪ್ರಕಟಿಸಿದ ನಿರ್ಮಲಾ ಸೀತಾರಾಮನ್
Update: 2024-02-01 07:41 GMT
ಹೊಸದಿಲ್ಲಿ: ದೇಶದಲ್ಲಿ ಹಾಲು ಮತ್ತು ಹೈನೋತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆಗಳನ್ನು ಗುರುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.
ಇಡೀ ವಿಶ್ವದಲ್ಲಿ ಭಾರತವೇ ಅತ್ಯಂತ ದೊಡ್ಡ ಹಾಲು ಉತ್ಪಾದಕ ದೇಶವಾಗಿದ್ದರೂ, ದೇಶದಲ್ಲಿ ಹಾಲು ಉತ್ಪಾದನೆ ಪ್ರಮಾಣ ಕಡಿಮೆ ಇದೆ ಎಂದು ಅವರು ಹೇಳಿದರು.
2022-23ನೇ ಸಾಲಿನಲ್ಲಿ ಭಾರತದ ಹಾಲು ಉತ್ಪಾದನಾ ಪ್ರಮಾಣವು ಶೇ. 4ರಷ್ಟು ಏರಿಕೆಯಾಗಿ 230.58 ದಶಲಕ್ಷ ಟನ್‌ಗೆ ತಲುಪಿದೆ ಎಂದು ಅವರು ಮಾಹಿತಿ ನೀಡಿದರು. ಎಣ್ಣೆ ಬೀಜಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ವ್ಯೂಹತಂತ್ರಗಳನ್ನು ರೂಪಿಸಲಾಗುವುದು ಎಂದೂ ಅವರು ಹೇಳಿದರು.
ಕೃಷಿ ಕ್ಷೇತ್ರದ ಮೌಲ್ಯವರ್ಧನೆ ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸುವತ್ತ ಹೆಜ್ಜೆ ಇಡಲಾಗಿದೆ ಎಂದು ಅವರು ಸಂಸತ್ತಿಗೆ ತಿಳಿಸಿದರು.