ಸರ್ಕಾರಿ ಶಾಲೆಗಳ ಅಭಿವೃದ್ಧಿ, ಉಚಿತ ವಿದ್ಯುತ್...: 10 ಗ್ಯಾರಂಟಿ ಘೋಷಿಸಿದ ಅರವಿಂದ್ ಕೇಜ್ರಿವಾಲ್
ಹೊಸದಿಲ್ಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ಎಎಪಿಯ 10 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ.
ಉಚಿತ ವಿದ್ಯುತ್, ಆಧುನಿಕ ಆರೋಗ್ಯ ಸೇವೆ, ಸಾರ್ವಜನಿಕ ಅಭಿವೃದ್ಧಿ ಯೋಜನೆ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಎಎಪಿ ʼಗ್ಯಾರಂಟಿʼ ನೀಡಿದೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಯಾವತ್ತೂ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ. ನನ್ನ ಗ್ಯಾರಂಟಿಗಳು ಈಗಾಗಲೇ ಸಾಬೀತಾಗಿವೆ. ಕೇಜ್ರಿವಾಲ್ ಗ್ಯಾರಂಟಿ ಬೇಕೋ, ಮೋದಿ ಗ್ಯಾರಂಟಿ ಬೇಕೋ ಎಂಬುದನ್ನು ಜನರೇ ತೀರ್ಮಾನಿಸಲಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ಈಗಾಗಲೇ ಇರುವ ನಿರಂತರ ವಿದ್ಯುತ್ ಪೂರೈಕೆಯ ಮಾದರಿಯನ್ನು ರಾಷ್ಟ್ರವ್ಯಾಪಿ ವಿಸ್ತರಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.
"10 ಗ್ಯಾರಂಟಿಗಳಲ್ಲಿ, ನಾವು ದೇಶದಲ್ಲಿ 24 ಗಂಟೆ ವಿದ್ಯುತ್ ನೀಡುತ್ತೇವೆ ಎಂಬುದು ಮೊದಲ ಗ್ಯಾರಂಟಿಯಾಗಿದೆ. ದೇಶದಲ್ಲಿ 3 ಲಕ್ಷ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿದೆ. ಆದರೆ ಬಳಕೆ ಕೇವಲ 2 ಲಕ್ಷ ಮೆಗಾವ್ಯಾಟ್ ಆಗಿದೆ. ನಮ್ಮ ದೇಶ ಹೆಚ್ಚು ವಿದ್ಯುತ್ ಉತ್ಪಾದಿಸಬಹುದು. ನಾವು ಅದನ್ನು ದೆಹಲಿ ಮತ್ತು ಪಂಜಾಬ್‌ನಲ್ಲಿ ಮಾಡಿದ್ದೇವೆ, ನಾವು ಅದನ್ನು ಎಲ್ಲಾ ಬಡವರಿಗೆ 200 ಯೂನಿಟ್‌ಗಳವರೆಗೆ ಉಚಿತವಾಗಿ ನೀಡುತ್ತೇವೆ, ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಬಹುದು” ಎಂದು ಅವರು ಹೇಳಿದ್ದಾರೆ.
ಕೇಜ್ರಿವಾಲ್ ಅವರ ಚುನಾವಣಾ ಖಾತರಿಗಳ ಪಟ್ಟಿಯಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಣ ಗುಣ ಮಟ್ಟ ಹೆಚ್ಚಿಸುವುದು ಮತ್ತೊಂದು ಪ್ರಮುಖ ಯೋಜನೆಯಾಗಿದೆ. ಈ ಯೋಜನೆ ಅಡಿಯಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿ ಪಡಿಸಲು ರೂ. 5 ಲಕ್ಷ ಕೋಟಿ ಬೇಕಾಗುತ್ತದೆ. ಒಟ್ಟು ವೆಚ್ಚದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ರೂ. 2.5 ಲಕ್ಷ ಕೋಟಿ ನೀಡಬೇಕಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
"ಇಂದು ನಮ್ಮ ಸರ್ಕಾರಿ ಶಾಲೆಗಳ ಸ್ಥಿತಿ ಚೆನ್ನಾಗಿಲ್ಲ. ಎಲ್ಲರಿಗೂ ಒಳ್ಳೆಯ ಮತ್ತು ಅತ್ಯುತ್ತಮವಾದ ಉಚಿತ ಶಿಕ್ಷಣದ ವ್ಯವಸ್ಥೆ ಮಾಡುತ್ತೇವೆ ಎಂಬುದು ನಮ್ಮ ಎರಡನೇ ಗ್ಯಾರಂಟಿ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣವನ್ನು ನೀಡುತ್ತವೆ. ನಾವು ದೆಹಲಿ ಮತ್ತು ಪಂಜಾಬ್‌ನಲ್ಲಿ ಮಾಡಿದ್ದೇವೆ. ಇದಕ್ಕಾಗಿ ರಾಜ್ಯ ಸರ್ಕಾರ ರೂ. 2.5 ಲಕ್ಷ ಕೋಟಿ ಹಾಗೂ ಕೇಂದ್ರ ಸರ್ಕಾರ ರೂ. 2.5 ಕೋಟಿ ನೀಡಲಿದೆ’ ಎಂದು ಅವರು ಹೇಳಿದರು.