ಕಂದಕದಲ್ಲಿ ಬಾಲಕಿಯ ಮೃತದೇಹ ಪತ್ತೆ: ಉದ್ರಿಕ್ತರಿಂದ ಪೊಲೀಸ್ ಠಾಣೆಗೆ ದಾಳಿ

Update: 2024-10-06 04:25 GMT

ಉದ್ರಿಕ್ತ ಗ್ರಾಮಸ್ಥರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿರುವುದು PC: x.com/hossain_shaher

ಜೋಯ್ ನಗರ (ದಕ್ಷಿಣ 24 ಪರಗಣಾ): ಒಂಬತ್ತು ವರ್ಷ ವಯಸ್ಸಿನ ಬಾಲಕಿಯ ಮೃತದೇಹ, ಜಿಲ್ಲೆಯ ಜೋಯ್ ನಗರದ ಆಕೆಯ ಮನೆಯ ಪಕ್ಕದ ಕಂದಕದಲ್ಲಿ ಶನಿವಾರ ಮುಂಜಾನೆ ಪತ್ತೆಯಾಗಿದೆ. ಬಾಲಕಿಯ ನಾಪತ್ತೆ ಪ್ರಕರಣದ ಬಗ್ಗೆ ಪೊಲೀಸರು ವಹಿಸಿದ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆಪಾದಿಸಿ ಉದ್ರಿಕ್ತ ಗ್ರಾಮಸ್ಥರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದರು.

ಟ್ಯೂಷನ್ ಗಾಗಿ ಮನೆಯಿಂದ ಹೊರಟಿದ್ದ ಆರನೇ ತರಗತಿಯಲ್ಲಿ ಕಲಿಯುತ್ತಿದ್ದ ಬಾಲಕಿ ಹಿಂದಿನ ದಿನ ನಾಪತ್ತೆಯಾದ ತಕ್ಷಣ ದೂರು ನೀಡಿದರೂ, ಪೊಲೀಸರು ಉದಾಸೀನ ತೋರಿದರು ಎನ್ನುವುದು ಗ್ರಾಮಸ್ಥರ ಆರೋಪ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ ಎನ್ನುವುದು ಕುಟುಂಬದವರ ಆರೋಪ.

ಜೋಯ್ ನಗರದ ಮಹಿಸ್ಮರಿ ಗ್ರಾಮದ ಪೊಲೀಸ್ ಹೊರಠಾಣೆಯ ಮೇಲೆ ದಾಳಿ ನಡೆಸಿದ ಉದ್ರಿಕ್ತ ಪ್ರತಿಭಟನಾಕಾರರು ಠಾಣೆಯನ್ನು ಧ್ವಂಸಗೊಳಿಸಿದರು. ಠಾಣೆಗೆ ಬೆಂಕಿ ಹಚ್ಚಿದ್ದಲ್ಲದೇ, ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲಿನ ದಾಳಿ ನಡೆಸಿದರು. ಪೊಲೀಸರು ಉದ್ರಿಕ್ತ ಗ್ರಾಮಸ್ಥರಿಂದ ತಪ್ಪಿಸಿಕೊಳ್ಳಲು ಒಂದು ಕಿಲೋಮೀಟರ್ ಓಡಿಹೋಗಬೇಕಾಯಿತು.

ಆ ಬಳಿಕ ಪೊಲೀಸರು ಮಹಿಸ್ಮರಿ ಗ್ರಾಮದ 19 ವರ್ಷದ ಯುವಕ ಮೊಸ್ತಾಕಿನ್ ಸರ್ದಾರ್ ಎಂಬಾತನನ್ನು ಬಾಲಕಿಯ ಹತ್ಯೆ ಆರೋಪದಲ್ಲಿ ಬಂಧಿಸಿದರು. "ಆತ ಬಾಲಕಿಯನ್ನು ಹತ್ಯೆ ಮಾಡಿರುವುದು ಒಪ್ಪಿಕೊಂಡಿದ್ದಾನೆ. ಆದರೆ ಅತ್ಯಾಚಾರ ಆರೋಪವನ್ನು ನಿರಾಕರಿಸಿದ್ದಾನೆ. ಮರಣೋತ್ತರ ಪರೀಕ್ಷೆಗಾಗಿ ನಾವು ಕಾಯುತ್ತಿದ್ದೇವೆ" ಎಂದು ಬರೂಯಿಪುರ ಎಸ್ಪಿ ಪಾಲೇಶ್ ಚಂದ್ರ ಧಾಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News