ವಿದೇಶಿ ಪ್ರವಾಸಿಗರ ಸಂಖ್ಯೆ ಇಳಿಕೆಗೆ ಇಡ್ಲಿ-ಸಾಂಬಾರ್ ಮಾರಾಟ ಕಾರಣ ಎಂದ ಗೋವಾ ಬಿಜೆಪಿ ಶಾಸಕ!

Update: 2025-02-27 21:47 IST
Michael Lobo

ಮೈಕಲ್ ಲೋಬೋ  |  PC : X \ @MichaelLobo76

  • whatsapp icon

ಪಣಜಿ: ಸಮುದ್ರ ತೀರದ ಗುಡಿಸಲುಗಳಲ್ಲಿ ಇಡ್ಲಿ-ಸಾಂಬಾರ್ ಮಾರಾಟ ಮಾಡುತ್ತಿರುವುದರಿಂದ, ಗೋವಾಗೆ ಆಗಮಿಸುತ್ತಿದ್ದ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ಗುರುವಾರ ಬಿಜೆಪಿ ಶಾಸಕ ಮೈಕಲ್ ಲೋಬೋ ದೂಷಿಸಿದ್ದಾರೆ.

ಉತ್ತರ ಗೋವಾದ ಕ್ಯಾಲಂಗ್ಯೂಟ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರಾವಳಿ ರಾಜ್ಯವಾದ ಗೋವಾಗೆ ಕೆಲವೇ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಿದ್ದರೆ, ಅದಕ್ಕೆ ರಾಜ್ಯ ಸರಕಾರವನ್ನು ದೂಷಿಸಲು ಸಾಧ್ಯವಿಲ್ಲ. ಇದಕ್ಕೆ ಎಲ್ಲರೂ ಸಮಾನ ಜವಾಬ್ದಾರರು ಎಂದು ಹೇಳಿದ್ದಾರೆ.

ಗೋವಾ ನಿವಾಸಿಗಳು ಸಮುದ್ರ ತೀರದಲ್ಲಿರುವ ತಮ್ಮ ಗುಡಿಸಲುಗಳನ್ನು ಇತರ ಸ್ಥಳಗಳ ವ್ಯಾಪಾರಿಗಳಿಗೆ ಬಾಡಿಗೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

“ಬೆಂಗಳೂರಿನ ಕೆಲವು ಮಂದಿ ಗುಡಿಸಲುಗಳಲ್ಲಿ ವಡಾಪಾವ್ ಅನ್ನು ಮಾರಾಟ ಮಾಡುತ್ತಿದ್ದರೆ, ಮತ್ತೆ ಕೆಲವು ಮಂದಿ ಇಡ್ಲಿ-ಸಾಂಬಾರ್ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿಯೇ, ಕಳೆದ ಎರಡು ವರ್ಷಗಳಿಂದ ರಾಜ್ಯಕ್ಕೆ ಭೇಟಿ ನೀಡುತ್ತಿದ್ದ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿದೆ” ಎಂದು ಅವರು ದೂರಿದ್ದಾರೆ.

ಆದರೆ, ದಕ್ಷಿಣ ಭಾರತದ ಜನಪ್ರಿಯ ಉಪಾಹಾರವಾದ ಇಡ್ಲಿ-ಸಾಂಬಾರ್ ನಿಂದ ರಾಜ್ಯದ ಪ್ರವಾಸೋದ್ಯಮದ ಮೇಲೆ ಹೇಗೆ ದುಷ್ಟಪರಿಣಾಮ ಉಂಟಾಗುತ್ತಿದೆ ಎಂಬುದನ್ನು ಬಿಜೆಪಿ ಶಾಸಕರಾದ ಅವರು ವಿವರಿಸಲಿಲ್ಲ.

“ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿರುವುದಕ್ಕೆ ಬೊಬ್ಬೆ ಹೊಡೆಯಲಾಗುತ್ತಿದೆ. ಉತ್ತರ ಭಾರತವಿರಲಿ ಅಥವಾ ದಕ್ಷಿಣ ಭಾರತವಿರಲಿ, ಕರಾವಳಿ ಭಾಗಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ತೀಕ್ಷ್ಣ ಇಳಿಕೆಯಾಗಿದೆ. ಇದಕ್ಕೆ ಹಲವು ಕಾರಣಗಳಿವೆ” ಎಂದು ಅವರು ಹೇಳಿದ್ದಾರೆ.

ಇದರ ಹೊಣೆಯನ್ನು ರಾಜ್ಯದ ಪ್ರತಿಯೊಬ್ಬರೂ ಹೊರಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News