18.56 ಕೆಜಿ ಚಿನ್ನ ಕಳ್ಳ ಸಾಗಣೆ ಪ್ರಕರಣ: 'ಕಿಂಗ್ ಪಿನ್'ನನ್ನು ಯುಎಇಯಿಂದ ಭಾರತಕ್ಕೆ ಕರೆತಂದ ಸಿಬಿಐ

Update: 2024-09-10 12:32 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಚಿನ್ನದ ಅಂತಾರಾಷ್ಟ್ರೀಯ ಕಳ್ಳಸಾಗಣೆ ದಂಧೆಯ 'ಕಿಂಗ್ ಪಿನ್'ನನ್ನು ಮಂಗಳವಾರ ಎನ್‌ಐಎ ಮತ್ತು ಇಂಟರ್‌ಪೋಲ್‌ನೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಯುಎಇಯಿಂದ ಕರೆತರಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಮುನಿಯಾದ್ ಅಲಿಖಾನ್ ಪ್ರಕರಣದ 'ಕಿಂಗ್ ಪಿನ್' ಎನ್ನಲಾಗಿದ್ದು, ಆತನನ್ನು ಯಶಸ್ವಿಯಾಗಿ ಭಾರತಕ್ಕೆ ಕರೆತರಲಾಗಿದೆ ಎಂದು ತಿಳಿದುಬಂದಿದೆ. ಆರೋಪಿಯ ಬಂಧನಕ್ಕೆ ಇಂಟರ್‌ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್‌ ಹೊರಡಿಸಲಾಗಿತ್ತು ಎನ್ನಲಾಗಿದೆ.

2020 ರಲ್ಲಿ ಸೌದಿ ಅರೇಬಿಯದಿಂದ ಜೈಪುರ ವಿಮಾನ ನಿಲ್ದಾಣಕ್ಕೆ 9 ಕೋಟಿ ರೂಪಾಯಿ ಮೌಲ್ಯದ 18.56 ಕಿಲೋಗ್ರಾಂಗಳಷ್ಟು ತೂಕದ ಚಿನ್ನವನ್ನು ಕಳ್ಳ ಸಾಗಣೆ ಮಾಡಲಾಗಿತ್ತು. ದೇಶದ ಆರ್ಥಿಕ ಭದ್ರತೆ ಮತ್ತು ವಿತ್ತೀಯ ಸ್ಥಿರತೆಯನ್ನು ಹಳಿತಪ್ಪಿಸುವ ಈ ಕ್ರಿಮಿನಲ್ ಪ್ರಕರಣವನ್ನು ಭೇದಿಸಿ, ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು NIA ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

ಯುಎಇಯಿಂದ ಜೈಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುನಿಯಾದ್ ಅಲಿ ಖಾನ್ ನನ್ನು ಎನ್‌ಐಎ ಬಂಧಿಸಿದೆ ಎಂದು ತಿಳಿದುಬಂದಿದೆ.

ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಶೌಕತ್ ಅಲಿ ಮತ್ತು ಮೊಹಬ್ಬತ್ ಅಲಿ ಅವರನ್ನು ಸೌದಿ ಅರೇಬಿಯಾದಿಂದ ಕ್ರಮವಾಗಿ ಎಪ್ರಿಲ್ 03, 2024 ಮತ್ತು ಆಗಸ್ಟ್ 17, 2023 ರಂದು ಸಿಬಿಐನ ಗ್ಲೋಬಲ್ ಆಪರೇಷನ್ ಸೆಂಟರ್ ಮತ್ತು ಇಂಟರ್‌ಪೋಲ್ ಎನ್‌ಸಿಬಿ ರಿಯಾದ್‌ನೊಂದಿಗೆ ಸಂಯೋಜಿಸಿದ ಕಾರ್ಯಾಚರಣೆಯಲ್ಲಿ ಭಾರತಕ್ಕೆ ಈಗಾಗಲೇ ಕರೆತರಲಾಗಿದೆ.

NIA ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ಮುನಿಯಾದ್ ಅಲಿ ಖಾನ್, ಇತರ ಆರೋಪಿಗಳೊಂದಿಗೆ ಸೇರಿ ಸೌದಿ ಅರೇಬಿಯದ ರಿಯಾದ್‌ನಿಂದ ಭಾರತಕ್ಕೆ ಅಕ್ರಮವಾಗಿ ಚಿನ್ನ ಸಾಗಿಸಲು ಸಂಚು ರೂಪಿಸಿದ್ದ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ರಿಯಾದ್‌ನಿಂದ ಜೈಪುರಕ್ಕೆ ಕಳ್ಳಸಾಗಣೆ ಮಾಡಲು ಇಬ್ಬರು ಆರೋಪಿಗಳೊಂದಿಗೆ ಮುನಿಯಾದ್ ಅಲಿ ಖಾನ್, ಚಿನ್ನವನ್ನು ನೀಡಿದ್ದನು ಎಂದು ಆರೋಪಿಸಲಾಗಿದೆ.

ಭಾರತಕ್ಕೆ ಕಳ್ಳಸಾಗಣೆಗಾಗಿ ಚಿನ್ನದ ಗಟ್ಟಿಗಳನ್ನು ಎಮರ್ಜೆನ್ಸಿ ಲೈಟ್ ಗಳ ಬ್ಯಾಟರಿಯೊಳಗೆ ಬಚ್ಚಿಡಲಾಗಿತ್ತು ಎನ್ನಲಾಗಿದೆ.

"ಮುನಿಯಾದ್ ಅಲಿ ಖಾನ್, ಸೌದಿ ಅರೇಬಿಯದ ರಿಯಾದ್‌ನಿಂದ ಭಾರತದ ಜೈಪುರಕ್ಕೆ ಅಂತರಾಷ್ಟ್ರೀಯ ಚಿನ್ನ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಈ ವಿಷಯವನ್ನು ಎನ್‌ಐಎ ಮಾರ್ಚ್ 22, 2021 ರಂದು ಜೈಪುರದ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಚಾರ್ಜ್‌ಶೀಟ್ ಮಾಡಿದೆ," ಎಂದು ಸಿಬಿಐ ವಕ್ತಾರರು ಹೇಳಿದ್ದಾರೆ.

2021ರ ಸೆಪ್ಟೆಂಬರ್ 13ರಂದು ಇಂಟರ್‌ಪೋಲ್‌ನಿಂದ ಖಾನ್ ವಿರುದ್ಧ ಸಿಬಿಐ, ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ಎನ್‌ಐಎ ಕೋರಿಕೆಯ ಮೇರೆಗೆ ಜಾಗತಿಕವಾಗಿ ಎಲ್ಲಾ ಕಾನೂನು ಜಾರಿ ಸಂಸ್ಥೆಗಳಿಗೆ ಆರೋಪಿಯ ಪತ್ತೆಗಾಗಿ ರವಾನಿಸಲಾಗಿತ್ತು.

ರೆಡ್ ಕಾರ್ನರ್ ನೋಟಿಸ್ ಸಹಾಯದಿಂದ ಕಿಂಗ್ ಪಿನ್ ಮುನಿಯಾದ್ ಅಲಿ ಖಾನ್ ನನ್ನು ಯುಎಇಯಲ್ಲಿ ಪತ್ತೆಹಚ್ಚಲಾಯಿತು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News