ರೂ. 33,500 ಕೋಟಿ GST ವಂಚನೆ ಆರೋಪ: ಕೇಂದ್ರದಿಂದ ಇನ್ಫೋಸಿಸ್ ಗೆ ವಿನಾಯಿತಿ?
ಬೆಂಗಳೂರು: ದೇಶದ ಎರಡನೆ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್ ವಿರುದ್ಧ ಕೇಳಿ ಬಂದಿದ್ದ ರೂ. 33,500 ಕೋಟಿ ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್ಟಿ) ವಂಚನೆ ಆರೋಪ ಪ್ರಕರಣದಿಂದ ಕೇಂದ್ರ ಸರಕಾರವು ವಿನಾಯಿತಿ ನೀಡುವ ಸಾಧ್ಯತೆ ಇದೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇನ್ಫೋಸಿಸ್ ಸಂಸ್ಥೆಯು ತನ್ನ ಸಾಗರೋತ್ತರ ಶಾಖೆಗಳ ಸೇವೆಗೆ ಸಂಬಂಧಿಸಿದಂತೆ GST ವಂಚನೆ ಎಸಗಿದ ಆರೋಪ ಎದುರಿಸುತ್ತಿದೆ. ಈ ಸಂಬಂಧ ಕರ್ನಾಟಕ ಜಿಎಸ್ಟಿ ವಿಭಾಗವು ಇನ್ಫೋಸಿಸ್ ಗೆ ನೋಟಿಸ್ ಜಾರಿಗೊಳಿಸಿತ್ತು. ನಂತರ ಈ ಪ್ರಕರಣವನ್ನು ಕೇಂದ್ರ ಮಟ್ಟದ ಜಿಎಸ್ಟಿ ಗುಪ್ತಚರ ಮಹಾನಿರ್ದೇಶನಾಲಯಕ್ಕೆ (ಡಿಜಿಜಿಐ) ಹಸ್ತಾಂತರಿಸಲಾಗಿತ್ತು.
ಕೇಂದ್ರ ಸರಕಾರವು ಇನ್ಫೋಸಿಸ್ ಸಂಸ್ಥೆಗೆ ತೆರಿಗೆ ವಿನಾಯಿತಿ ನೀಡುವ ಸಾಧ್ಯತೆ ತೀರಾ ಕಡಿಮೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, ಸರಕಾರದ ಈ ಕ್ರಮದ ವಿರುದ್ಧ ಸೇವಾ ತಂತ್ರಾಂಶ ವಲಯದ ದೈತ್ಯ ಉದ್ಯಮವಾದ ಇನ್ಫೋಸಿಸ್ ನಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಸರಕಾರದ ಈ ನಿರ್ಧಾರವನ್ನು ಟೀಕಿಸಿದ್ದ ಇನ್ಫೋಸಿಸ್ ಆಡಳಿತ ಮಂಡಳಿ ಸದಸ್ಯ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಮೋಹನ್ ದಾಸ್ ಪೈ, ‘ಇದು ಅತಿರೇಕ ಮತ್ತು ತೆರಿಗೆ ಭಯೋತ್ಪಾದನೆಯ ಸ್ಪಷ್ಟ ಉದಾಹರಣೆ” ಎಂದು ಜರಿದಿದ್ದರು.
ಇನ್ಫೋಸಿಸ್ ವಿರುದ್ಧ ಕೇಳಿ ಬಂದಿರುವ ತೆರಿಗೆ ವಂಚನೆ ಆರೋಪದ ನಡುವೆ ಮಧ್ಯಪ್ರವೇಶಿಸುವಂತೆ ತಂತ್ರಾಂಶ ಮತ್ತು ಸೇವಾ ವಲಯದ ರಾಷ್ಟ್ರೀಯ ಒಕ್ಕೂಟವು ಕೇಂದ್ರ ಸರಕಾರವನ್ನು ಆಗ್ರಹಿಸಿತ್ತು. ಇಂತಹ ನೋಟಿಸ್ ಗಳು ಉದ್ಯಮದಲ್ಲಿ ಅಸ್ಥಿರತೆ ಸೃಷ್ಟಿಸಬಾರದು ಹಾಗೂ ಭಾರತದ ಉದ್ಯಮ ವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತಿರಬಾರದು ಎಂದು ಸಲಹೆ ನೀಡಿತ್ತು.
ಈ ಸಂಬಂಧ ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯಲ್ಲಿ ಜಿಎಸ್ಟಿ ಸಮಿತಿಯ ಸಭೆ ನಡೆದಿದ್ದು, ಸಮಿತಿಯ ನಿರ್ಧಾರವನ್ನು ಸೆಪ್ಟೆಂಬರ್ 9ರಂದು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪ್ರಕರಣದ ಹಿನ್ನೆಲೆ:
ಜುಲೈ 2017ರಿಂದ 2021-22ನೇ ಸಾಲಿನವರಿಗೆ ಇನ್ಫೋಸಿಸ್ ಸಂಸ್ಥೆಯು ರೂ. 33,500 ಕೋಟಿ ಮೊತ್ತದ ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್ಟಿ) ವಂಚಿಸಿರುವ ಆರೋಪ ಎದುರಿಸುತ್ತಿದೆ. ಈ ಮೊತ್ತವು 2024-25ರ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಗಳಿಸಿರುವ ವರಮಾನದ ಶೇ. 85ರಷ್ಟಿದೆ.
ಆಗಸ್ಟ್ 3ರಂದು ಷೇರುಪೇಟೆಗೆ ಇನ್ಫೋಸಿಸ್ ಸಲ್ಲಿಸಿದ ಮಾಹಿತಿಯ ಪ್ರಕಾರ, 2017-18ನೇ ಸಾಲಿನ ಹಣಕಾಸು ವರ್ಷದ ತೆರಿಗೆಗೆ ಸಂಬಂಧಿಸಿದಂತೆ ರೂ. 38.98 ಶತಕೋಟಿ ಮೊತ್ತಕ್ಕೆ ಅಂತಿಮಗೊಳಿಸಲಾಗಿತ್ತು ಎಂದು ಹೇಳಿದೆ. ಕೇಂದ್ರ ಹಾಗೂ ರಾಜ್ಯಗಳಿಗೆ ಸಂಬಂಧಿಸಿದ ಎಲ್ಲ ಬಾಕಿಯನ್ನೂ ಪಾವತಿಸಲಾಗಿದೆ ಎಂದೂ ಈ ಹಿಂದೆ ಹೇಳಿತ್ತು ಎಂದು ವರದಿಯಾಗಿದೆ.
ದೇಶದ ಎರಡನೆ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್ ಗೆ ಜಿಎಸ್ಟಿ ಕಾನೂನು ಅಡಿಯಲ್ಲಿ ನೋಟಿಸ್ ಜಾರಿಗೊಳಿಸಲಾಗಿತ್ತು. ಈ ನೋಟಿಸ್ ಗೆ ಉತ್ತರಿಸಲು ಸಂಸ್ಥೆಯು 10 ದಿನಗಳ ಕಾಲಾವಕಾಶ ಕೋರಿತ್ತು.