ಹಲ್ದ್ವಾನಿ ಹಿಂಸಾಚಾರ ಪ್ರಕರಣ : ಪೊಲೀಸರಿಂದ ಬಂಧನ ಕೇಂದ್ರ ಸ್ಥಾಪನೆ ; ಸತ್ಯ ಶೋಧನಾ ತಂಡ ಆರೋಪ
ಹೊಸದಿಲ್ಲಿ : ಮರ್ಯಮ್ ಮಸೀದಿ ಹಾಗೂ ಅಬ್ದುಲ್ ರಝಾಕ್ ಝಕರಿಯಾ ಮದರಸ ಧ್ವಂಸಗೊಳಿಸಿದ ಬಳಿಕ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಉದ್ವಿಗ್ನತೆ ಉಂಟಾಗಿ ಒಂದು ವಾರ ಕಳೆದಿದೆ. ಈಗ ಈ ಕುರಿತ ಸತ್ಯಶೋಧನಾ ವರದಿಯೊಂದು ಹಿಂಸಾಚಾರ ಭುಗಿಲೆದ್ದ ಹಾಗೂ ಕಾನೂನು ಪಾಲನೆಯಲ್ಲಿ ಉಂಟಾದ ಲೋಪಗಳ ಬಗ್ಗೆ ಖಂಡನೀಯ ಆರೋಪಗಳನ್ನು ಮಾಡಿದೆ.
‘‘ಬುಲ್ಡೋಜಿಂಗ್ ಪೀಸ್: ಸ್ಟೇಟ್ ವಯಲೆನ್ಸ್ ಆ್ಯಂಡ್ ಅಪಾಥಿ ಇನ್ ಮುಸ್ಲಿಂ ಸೆಟ್ಲಮೆಂಟ್ಸ್ ಆಫ್ ಹಲ್ದ್ವಾನಿ’’ ಶೀರ್ಷಿಕೆ ಅಡಿ ಸತ್ಯ ಶೋಧನಾ ವರದಿಯನ್ನು ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ನಡೆಸಿದೆ.
ಎಪಿಸಿಆರ್‌ನ ನದೀಮ್ ಖಾನ್ ಹಾಗೂ ಮುಹಮ್ಮದ್ ಮುಬಶ್ಶಿರ್ ಅನೀಕ್, ಕಾರವನ್-ಎ-ಮೊಹಬ್ಬತ್‌ನ ಹರ್ಷ ಮಂದರ್, ನವಶರಣ್ ಸಿಂಗ್, ಅಶೋಕ್ ಶರ್ಮಾ, ಕುಮಾರ್ ನಿಖಿಲ್ ಹಾಗೂ ನಾಗರಿಕ ಹಕ್ಕುಗಳ ಹೋರಾಟಗಾರ ಝಾಹಿದ್ ಖಾದ್ರಿ ಅವರನ್ನು ಈ ಸತ್ಯ ಶೋಧನಾ ತಂಡ ಒಳಗೊಂಡಿದೆ.
ಹಲ್ದ್ಪಾನಿ ಹಿಂಸಾಚಾರದಲ್ಲಿ ಚಾಲಕ ಫಾಹೀಮ್ ಹಾದಿ, ತಂದೆ ಮತ್ತು ಮಗ ಮುಹಮ್ಮದ್ ಝಾಹಿದ್ ಹಾಗೂ ಅನಾಸ್ ಸೇರಿದಂತೆ ಕನಿಷ್ಠ 6 ಮಂದಿ ಮೃತಪಟ್ಟಿದ್ದರು ಎಂದು ‘ದಿ ಕ್ವಿಂಟ್ ವರದಿ ಮಾಡಿತ್ತು. ಈ ಘಟನೆಯ ನಂತರ ಸುಮಾರು 300 ಕುಟುಂಬಗಳು ಪೊಲೀಸರ ದಬ್ಬಾಳಿಕೆಗೆ ಒಳಗಾದವು. ಪೊಲೀಸರು ಹಲವರ ಮನೆಯ ವಸ್ತುಗಳಿಗೆ ಹಾನಿ ಮಾಡಿದ್ದರು. ಕುಟುಂಬದ ಸದಸ್ಯರಿಗೆ ಥಳಿಸಿದ್ದರು. ಕೆಲವರನ್ನು ವಶಕ್ಕೆ ತೆಗೆದುಕೊಂಡಿದ್ದರು.
ಪಿಟಿಐಯೊಂದಿಗೆ ಮಾತನಾಡಿದ ನದೀಮ್ ಖಾನ್, ‘‘ಬಂಧನಕ್ಕಿಂತ ಹೆಚ್ಚು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಸ್ಥಳೀಯ ಮೂಲಗಳ ಪ್ರಕಾರ 15 ಕಿ.ಮೀ. ದೂರದಲ್ಲಿರುವ ಶಾಲೆಯೊಂದನ್ನು ಬಂಧನ ಕೇಂದ್ರವಾಗಿ ಬಳಸಲಾಗಿತ್ತು. ಹಿಂಸಾಚಾರದಲ್ಲಿ 5,000ಕ್ಕೂ ಅಧಿಕ ಜನರು ಭಾಗಿಯಾಗಿದ್ದಾರೆ ಎಂದು ಸ್ಥಳೀಯರು ನಮಗೆ ತಿಳಿಸಿದ್ದಾರೆ. ಆದರೆ, ವೀಡಿಯೊ ಮಾದರಿಗಳು ಅವರಿಗೆ ಹೋಲಿಕೆ ಮಾಡಲು ಸಾಧ್ಯವಾಗಿಲ್ಲ. ಯಾಕೆಂದರೆ, ಆರೋಪಿಗಳು ಸ್ಥಳೀಯರು ಆಗಿರಲಾರರು’’ ಎಂದಿದ್ದಾರೆ.
‘ದಿ ಕ್ವಿಂಟ್’ ಕ್ವಿಂಟ್‌ನೊಂದಿಗೆ ಮಾತನಾಡಿದ ಹಲ್ದ್ವಾನಿ ಪೊಲೀಸ್‌ನ ಪಿಆರ್‌ಒ ದಿನೇಶ್ ಜೋಷಿ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ‘‘ಅಲ್ಲಿ ಅಂತಹ ಯಾವುದೇ ಬಂಧನ ಕೇಂದ್ರ ಇರಲಿಲ್ಲ. ಶಾಲೆ ಎಂದಿನಂತೆ ಕಾರ್ಯ ನಿರ್ವಹಿಸುತ್ತಿತ್ತು. ಅಲ್ಲಿ ಅವರು ಮಂಡಳಿ ಪರೀಕ್ಷೆಗಳನ್ನು ನಡೆಸುತ್ತಿದ್ದರು’’ ಎಂದು ಹೇಳಿದ್ದಾರೆ.
ಸತ್ಯಶೋಧನ ತಂಡದ ಪ್ರಕಾರ, ಹಲ್ದ್ವಾನಿ ಘಟನೆಯು ಉತ್ತರಾಖಂಡವನ್ನು ಇತರ ಅಲ್ಪಸಂಖ್ಯಾತರಿಗೆ ಯಾವುದೇ ಸ್ಥಾನವಿಲ್ಲದ ಹಿಂದೂಗಳ ಪವಿತ್ರ ಭೂಮಿ ‘ದೇವಭೂಮಿ’ಯಾಗಿ ರೂಪಿಸುವ ಕಲ್ಪನೆಯೊಂದಿಗೆ ಆಳವಾಗಿ ಸಂಬಂಧ ಹೊಂದಿದೆ.
ಸಾವಿನ ಸಂಖ್ಯೆಯಿಂದ ಹಿಡಿದು ಕಂಡಲ್ಲಿ ಗುಂಡು ಹಾರಿಸುವ ಆದೇಶದ ವರೆಗೆ ಸಂಶಯಾಸ್ಪದ ಹೇಳಿಕೆಯನ್ನು ಪೊಲೀಸರು ನೀಡಿದ್ದಾರೆ ಎಂದು ತಂಡ ಹೇಳಿದೆ.
ಹಿಂಸಾಚಾರದಲ್ಲಿ 7 ಮಂದಿ ಸಾವನ್ನಪ್ಪಿದ್ದರು. 31 ಮಂದಿಯನ್ನು ಬಂಧಿಸಲಾಗಿದೆ. 90ಕ್ಕೂ ಅಧಿಕ ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. 5,000 ಅನಾಮಿಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸಾವಿನ ಸಂಖ್ಯೆ 20ಕ್ಕಿಂತ ಹೆಚ್ಚಿದೆ ಎಂದು ಸ್ಥಳೀಯರು ಪ್ರತಿಪಾದಿಸಿದ್ದಾರೆ ಎಂದು ವರದಿ ಹೇಳಿದೆ.
ಈ ನಡುವೆ ಗಂಭೀರ ಗಾಯಗೊಂಡಿದ್ದ ಮುಹಮ್ಮದ್ ಇಸ್ರಾರ್ ಅವರು ಫೆಬ್ರವರಿ 13ರಂದು ಸಾವನ್ನಪ್ಪುವುದರೊಂದಿಗೆ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿತ್ತು. ಇದಕ್ಕಿಂತ ಮುನ್ನ ಎಸ್‌ಎಸ್‌ಪಿ ಪ್ರಹ್ಲಾದ್ ಮೀನಾ ಸತ್ತವರ ಸಂಖ್ಯೆ 5 ಮಂದಿ ಎಂದು ಹೇಳಿದ್ದರು. ಆದರೆ, ಫೆಬ್ರವರಿ 9ರಂದು ಎಸ್‌ಪಿ ಹರ್ಬಜನ್ ಸಿಂಗ್ ಮೃತಪಟ್ಟವರ ಸಂಖ್ಯೆ ಕನಿಷ್ಠ 6 ಎಂದು ಹೇಳಿದ್ದರು.
ಧ್ರುವೀಕರಣದ ನಿರೂಪಣೆಗಳು ಹಾಗೂ ಲವ್ ಜಿಹಾದ್, ಭೂಮಿ ಜಿಹಾದ್, ವ್ಯಾಪಾರಿ ಜಿಹಾದ್ ಹಾಗೂ ಮಝಾರ್ ಜಿಹಾದ್‌ನಂತಹ ಆಧಾರವಿಲ್ಲದ ಪ್ರತಿಪಾದನೆಗಳು ಹಾಗೂ ಅಲ್ಪಸಂಖ್ಯಾತರ ಮೇಲಿನ ಆರ್ಥಿಕ ಹಾಗೂ ಸಾಮಾಜಿಕ ಬಹಿಷ್ಕಾರದ ಕರೆಗಳು ಅಶಾಂತಿ ಉಲ್ಬಣಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಸತ್ಯಶೋಧನಾ ವರದಿ ಹೇಳಿದೆ.
ಈ ಘಟನೆಯನ್ನು ಪ್ರಾಧಿಕಾರ ಕೂಲಂಕಷವಾಗಿ ತನಿಖೆ ನಡೆಸಬೇಕು. ಮಾನವ ಹಕ್ಕುಗಳನ್ನು ಉಲ್ಲಂಘಿಸಿದವರನ್ನು ಈ ಘಟನೆಗೆ ಉತ್ತರದಾಯಿಯನ್ನಾಗಿ ಮಾಡಬೇಕು ಹಾಗೂ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ತಂಡ ವರದಿಯಲ್ಲಿ ಆಗ್ರಹಿಸಿದೆ.
ವರದಿ ಎತ್ತಿದ ಪ್ರಮುಖ ಪ್ರಶ್ನೆಗಳು
► ಹೈಕೋರ್ಟ್‌ನಲ್ಲಿ ಫೆಬ್ರವರಿ 14ರಂದು ವಿಚಾರಣೆ ನಡೆಯಲಿರುವ ಹೊರತಾಗಿಯೂ ಮಸೀದಿ ಮತ್ತು ಮದರಸವನ್ನು ಕೆಡವಲು ಆಡಳಿತ ಏಕೆ ಆತುರ ತೋರಿತು?
► ಬೀಗ ಮುದ್ರೆ ಹಾಕುವ ಸಂದರ್ಭದಲ್ಲಿ ಸಹಕರಿಸಿದ್ದರೂ ಎರಡನೇ ಬಾರಿ ಅಲ್ಪಸಂಖ್ಯಾತ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಯಾಕೆ?
► ಉತ್ತರಾಂಚಲದ ದೀಪ್‌ನ ಪತ್ರಕರ್ತ ಸಲೀಂ ಖಾನ್ ಅವರ ಮನೆಗೆ ಪೊಲೀಸರು ನುಗ್ಗಿದ್ದಾರೆ. ಅವರ ಪತ್ನಿ ಮಕ್ಕಳು ಮೇಲೆ ಹಲ್ಲೆ ನಡೆಸಿದ್ದಾರೆ. ಕರ್ಫ್ಯ್ಯೂ ಹಾಗೂ ಕಂಡಲ್ಲಿ ಗುಂಡು ಹಾರಿಸುವ ಆದೇಶ ಜಾರಿಯಲ್ಲಿರುವಾಗ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಸರಕಾರ ಹೇಗೆ ಹೇಳಿತು?
► ಇನ್ನೊಂದು ಘಟನೆಯಲ್ಲಿ ಅಲ್ಪಸಂಖ್ಯಾತರ ವಿವಾಹ ಸಮಾರಂಭದ ಮೇಲೆ ದಾಳಿ ನಡೆಸಿದ ಗುಂಪು ಪೊಲೀಸ್ ಠಾಣೆಯ ಮೇಲೂ ದಾಳಿ ನಡೆಸಿತು. ಸ್ಥಳೀಯರು ಹಾಗೂ ಪೊಲೀಸರಿಗೆ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಇದು ದಾಳಿಕೋರರು ಹೊರಗಿನವರು ಎಂದು ಸೂಚಿಸುತ್ತದೆ. ಗುಂಪು ಅಥವಾ ದಾಳಿಕೋರರು ಅಲ್ಪಸಂಖ್ಯಾತರು ಆಗಿದ್ದರೆ, ಅವರು ಅಲ್ಪಸಂಖ್ಯಾತರ ಮೇಲೆಯೇ ಯಾಕೆ ದಾಳಿ ನಡೆಸುತ್ತಿದ್ದರು?