ಹರ್ಯಾಣ: 50ಕ್ಕೂ ಅಧಿಕ ಬಾಲಕಿಯರಿಗೆ ಲೈಂಗಿಕ ಕಿರುಕುಳ

Update: 2023-11-05 15:48 GMT

ಸಾಂದರ್ಭಿಕ ಚಿತ್ರ

ಚಂಡಿಗಢ : ಹರ್ಯಾಣದ ಜಿಂದ್ ಜಿಲ್ಲೆಯ ಸರಕಾರಿ ಶಾಲೆಯ 50ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಅಲ್ಲಿನ ಪ್ರಾಂಶುಪಾಲನನ್ನು ಬಂಧಿಸಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

‘‘ಆರೋಪಿ ಪ್ರಾಂಶುಪಾಲರನ್ನು ಶನಿವಾರ ಬಂಧಿಸಲಾಗಿದೆ’’ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಐವರು ಸದಸ್ಯರ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿರುವ ಪೊಲೀಸ್ ಉಪ ಅಧೀಕ್ಷಕ ಅಮಿತ್ ಕುಮಾರ್ ಭಾಟಿಯಾ ಹೇಳಿದ್ದಾರೆ. ‘‘ಪ್ರಾಂಶುಪಾಲರು ಕಳೆದ 5 ದಿನಗಳಿಂದ ತಲೆ ಮರೆಸಿಕೊಂಡಿದ್ದರು. ಆದರೆ, ಅವರನ್ನು ನಮ್ಮ ತಂಡ ಬಂಧಿಸಿತು’’ ಎಂದು ಅವರು ತಿಳಿಸಿದ್ದಾರೆ.

ಲೈಂಗಿಕ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಜಿಂದ್ ಜಿಲ್ಲಾಡಳಿತ ಪ್ರಾಂಶುಪಾಲರನ್ನು ಅಮಾನತುಗೊಳಿಸಿದ ಕೆಲವು ದಿನಗಳ ಬಳಿಕ ಹರ್ಯಾಣ ಜಿಂದ್ ಜಿಲ್ಲೆಯ ಪೊಲೀಸರು ಸೋಮವಾರ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳು ಹಾಗೂ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಾಂಶುಪಾಲರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಜಿಂದ್ ಜಿಲ್ಲೆಯ ಸರಕಾರಿ ಶಾಲೆಯ 50ಕ್ಕೂ ಅಧಿಕ ವಿದ್ಯಾರ್ಥಿನಿಯರು ಹೇಳಿದ್ದಾರೆ ಎಂದು ಹರ್ಯಾಣ ರಾಜ್ಯ ಮಹಿಳಾ ಆಯೋಗ ಹೇಳಿದೆ. ‘‘ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿನಿಯರ 60 ಲಿಖಿತ ದೂರುಗಳನ್ನು ನಾವು ಸ್ವೀಕರಿಸಿದ್ದೇವೆ. ಇವರಲ್ಲಿ 50 ವಿದ್ಯಾರ್ಥಿನಿಯರು ತಮ್ಮ ದೂರುಗಳಲ್ಲಿ ಪ್ರಾಂಶುಪಾಲರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ತಿಳಿಸಿದ್ದಾರೆ. ಉಳಿದ 10 ವಿದ್ಯಾರ್ಥಿನಿಯರು ತಮ್ಮ ದೂರಿನಲ್ಲಿ ಪ್ರಾಂಶುಪಾಲರ ಈ ನಡತೆ ನಮಗೆ ತಿಳಿದಿತ್ತು ಎಂದು ಹೇಳಿದ್ದಾರೆ’’ ಎಂದು ರಾಜ್ಯಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ತಿಳಿಸಿದ್ದಾರೆ.

ಎಲ್ಲಾ ದೂರುದಾರರು ಬಾಲಕಿಯರು. ಪ್ರಾಂಶುಪಾಲರು ತಮ್ಮನ್ನು ಕಚೇರಿಗೆ ಕರೆಸಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ಬಾಲಕಿಯರು ಆರೋಪಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಶಾಲೆಯ ವಿದ್ಯಾರ್ಥಿನಿಯರ ಗುಂಪೊಂದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಹಾಗೂ ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದು ತಮ್ಮ ಸಂಕಷ್ಟಗಳನ್ನು ತೋಡಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News