ಭಾರೀ ಮಳೆ: ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ವೇನಲ್ಲಿ ಮತ್ತೆ ಭೂಕುಸಿತ, ವಾಹನ ಸಂಚಾರ ಅಸ್ತವ್ಯಸ್ತ

Update: 2023-07-28 05:06 GMT

ಮುಂಬೈ: ದೇಶದ ಬಹುತೇಕ ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ಕರ್ನಾಟಕ, ಹಿಮಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು  ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

 ಏತನ್ಮಧ್ಯೆ, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ವೇಯಲ್ಲಿ ಗುರುವಾರ ರಾತ್ರಿ ಕಾಮ್‌ ಶೆಟ್ ಸುರಂಗದ ಬಳಿ ಹೊಸದಾಗಿ ಭೂಕುಸಿತ ಸಂಭವಿಸಿದ್ದು, ವಾಹನಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆದ್ದಾರಿ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು, ಜನನಿಬಿಡ 6 ಪಥದ ರಸ್ತೆಯಲ್ಲಿನ ಮಣ್ಣಿನ ರಾಶಿ ತೆಗೆದುಹಾಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ಹೇಳಿದರು.

ಕಳೆದ ಹಲವು ದಿನಗಳಿಂದ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಗುರುವಾರ ಮುಂಬೈನಲ್ಲಿ ಭಾರೀ ಮಳೆಯಿಂದಾಗಿ ಹಲವಾರು ಪ್ರದೇಶಗಳು ಜಲಾವೃತವಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ, ಆದರೆ ನೆರೆಯ ಜಿಲ್ಲೆಗಳಾದ ಥಾಣೆ ಮತ್ತು ರಾಯಗಡದಲ್ಲಿ 100 ಮಿ.ಮೀ. ಗೂ ಅಧಿಕ ಮಳೆಯಾಗಿದೆ.

ಐಎಂಡಿ ಮುಂಬೈಗೆ ಯೆಲ್ಲೋ  ಅಲರ್ಟ್ ಘೋಷಿಸಿದ್ದು, ಶುಕ್ರವಾರ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದ ಥಾಣೆ, ಪಾಲ್ಗರ್ ಹಾಗೂ ರತ್ನಗಿರಿ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 


Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News