ಹೇಮಂತ್-ಕಲ್ಪನಾ: ಜಾರ್ಖಂಡ್‌ನಲ್ಲಿ ಜೆಎಂಎಂ ಅದ್ಭುತ ಪ್ರದರ್ಶನದ ಹಿಂದಿನ ಪ್ರಭಾವಿ ದಂಪತಿ
ರಾಂಚಿ: ಬಿಜೆಪಿಯು ‘ಬಂಟಿ ಮತ್ತು ಬಬ್ಲಿ’ ಎಂದು ಗೇಲಿ ಮಾಡಿದ್ದ ಹೇಮಂತ್ ಸೊರೇನ್ ಮತ್ತು ಕಲ್ಪನಾ ಸೊರೇನ್ ದಂಪತಿ ಇಂಡಿಯಾ ಮೈತ್ರಿಕೂಟದ ಭಾಗವಾಗಿ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ)ವನ್ನು ಸತತ ಎರಡನೇ ಅವಧಿಗೆ ರಾಜ್ಯದಲ್ಲಿ ಅಧಿಕಾರ ಗದ್ದುಗೆಯತ್ತ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಈ ವರ್ಷದ ಆರಂಭದಲ್ಲಿ ತನ್ನ ಪತಿಯ ಬಂಧನದ ಬಳಿಕ ರಾಜಕೀಯವನ್ನು ಪ್ರವೇಶಿಸಿದ್ದ ಅವರ ಪತ್ನಿ ಹಾಗೂ ಶಾಸಕಿ ಕಲ್ಪನಾ ಸೊರೇನ್ ಚುನಾವಣೆಗಳು ಘೋಷಣೆಯಾದ ಬಳಿಕ ಸುಮಾರು 200 ಚುನಾವಣಾ ರ್‍ಯಾಲಿಗಳನ್ನು ನಡೆಸಿದ್ದರು.
ಚುನಾವಣಾ ಆಯೋಗವು ಫಲಿತಾಂಶಗಳನ್ನು ಇನ್ನಷ್ಟೇ ಪ್ರಕಟಿಸಬೇಕಿದ್ದರೂ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ವಿಜಯೋತ್ಸವವನ್ನು ಆಚರಿಸುತ್ತಿದ್ದಾರೆ.
ಚುನಾವಣಾ ಆಯೋಗದ ಪ್ರಕಾರ ಶನಿವಾರ ಅಪರಾಹ್ನ 3:30ರ ವೇಳೆಗೆ 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ ತಾನು ಸ್ಪರ್ಧಿಸಿದ್ದ 43 ಸ್ಥಾನಗಳ ಪೈಕಿ 33ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ಪಕ್ಷವು ಎದುರಿಸುತ್ತಿರುವ ಸವಾಲುಗಳನ್ನು ಗಮನಿಸಿದರೆ ಈ ಪ್ರದರ್ಶನ ಗಮನಾರ್ಹವಾಗಿದೆ. ಅದರ ಇಬ್ಬರು ಶಾಸಕರಾದ ನಳಿನ ಸೊರೇನ್ ಮತ್ತು ಜೋಬಾ ಮಝಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಸೀತಾ ಸೊರೇನ್, ಚಂಪಯಿ ಸೊರೇನ್ ಮತ್ತು ಲೋಬಿನ್ ಹೆಂಬ್ರಾಮ್ ಅವರಂತಹ ಪಕ್ಷದ ಪ್ರಮುಖ ನಾಯಕರು ಬಿಜೆಪಿಗೆ ನಿಷ್ಠೆಯನ್ನು ಬದಲಿಸಿದ್ದಾರೆ.
ಜೆಎಂಎಂ ಜಾರ್ಖಂಡ್‌ನಲ್ಲಿ ಅಧಿಕಾರಕ್ಕೆ ಮರಳಿದರೆ ಅದು ಬುಡಕಟ್ಟು ಸಮುದಾಯಗಳಲ್ಲಿ ಸೋರೇನ್‌ಗಳ ಗಾಢ ಪ್ರಭಾವವನ್ನು ಸೂಚಿಸುತ್ತದೆ. ಭೂ ಹಗರಣ ಆರೋಪಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಈ ವರ್ಷದ ಜ.31ರಂದು ಹೇಮಂತ್ ಸೋರೇನ್ ಅವರನ್ನು ಬಂಧಿಸಿದ ಬಳಿಕ ಸೊರೇನ್‌ಗಳು ಬುಡಕಟ್ಟು ಸಮುದಾಯಗಳ ಭಾವನೆಗಳನ್ನು ಯಶಸ್ವಿಯಾಗಿ ಬಡಿದೆಬ್ಬಿಸಿದ್ದರು.
ಹೇಮಂತ ಮತ್ತು ಕಲ್ಪನಾ ಬುಡಕಟ್ಟು ಮತದಾರರಲ್ಲಿ ಅನುಕಂಪದ ಅಲೆಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಡಳಿತ ವಿರೋಧ ಅಲೆಯಿದ್ದರೂ ಅದರ ಲಾಭ ಪಡೆದುಕೊಳ್ಳುವಲ್ಲಿ ಬಿಜೆಪಿ ವಿಫಲಗೊಂಡಿದೆ ಎನ್ನುತ್ತಾರೆ ಚುನಾವಣಾ ವಿಶ್ಲೇಷಕರು.
ಹೇಮಂತ್ ಮತ್ತು ಕಲ್ಪನಾ ಇಬ್ಬರೂ ತಮ್ಮ ಮತಕ್ಷೇತ್ರಗಳಲ್ಲಿ ಭಾರೀ ಮುನ್ನಡೆಯಲ್ಲಿದ್ದಾರೆ.
ಜೆಎಂಎಂ ಪ್ರಚಾರ ಅಭಿಯಾನವು ಕಲ್ಯಾಣ ಯೋಜನೆಗಳ ಭರವಸೆಗಳು ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಈ.ಡಿ. ಮತ್ತು ಸಿಬಿಐಗಳನ್ನು ಪ್ರತಿಪಕ್ಷಗಳ ವಿರುದ್ಧ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳನ್ನು ಕೇಂದ್ರೀಕರಿಸಿತ್ತು. ಬಿಜೆಪಿ ತನ್ನ ವಿರುದ್ಧ ದುರುದ್ದೇಶಪೂರಿತ ಪ್ರಚಾರಕ್ಕಾಗಿ 500 ಕೋಟಿ ರೂ.ಗೂ ಅಧಿಕ ಹಣವನ್ನು ವೆಚ್ಚ ಮಾಡಿದೆ ಎಂದೂ ಹೇಮಂತ್ ಆರೋಪಿಸಿದ್ದರು.
ಜೆಎಂಎಂ ತನ್ನ ಮೈಯಾನ ಸಮ್ಮಾನ್ ಯೋಜನೆಯಡಿ 18ರಿಂದ 50 ವರ್ಷ ವಯೋಮಾನದ ಮಹಿಳೆಯರಿಗೆ ಮಾಸಿಕ 1,000 ರೂ.ಗಳ ಆರ್ಥಿಕ ನೆರವು ಒದಗಿಸಿತ್ತು ಮತ್ತು ತಾನು ಗೆದ್ದರೆ ಅದನ್ನು 2,500 ರೂ.ಗೆ ಹೆಚ್ಚಿಸುವುದಾಗಿ ನೀಡಿದ್ದ ಭರವಸೆಯೂ ಅದರ ಅದ್ಭುತ ಚುನಾವಣಾ ಪ್ರದರ್ಶನದಲ್ಲಿ ಕೆಲಸ ಮಾಡಿದೆ.