ಹಿಂಡನ್ ಬರ್ಗ್ ಆರೋಪ: ‘ನಾವು ಎಚ್ಚರಿಕೆಯಿಂದಿರಬೇಕು’ ಎಂದು ಪ್ರಶಾಂತ್ ಭೂಷಣ್ ಗೆ ಹೇಳಿದ ಸುಪ್ರೀಂ ಕೋರ್ಟ್

Update: 2023-11-24 14:41 GMT

ಸುಪ್ರೀಂ ಕೋರ್ಟ್ | Photo: PTI 

ಹೊಸದಿಲ್ಲಿ: ಅದಾನಿ ಸಮೂಹವನ್ನು ಗುರಿಯಾಗಿಸಿಕೊಂಡು ಅಮೆರಿಕಾದ ಹಿಂಡೆನ್ ಬರ್ಗ್ ಮಾಡಿರುವ ‘Organised Crime and Corruption Reporting Project (OCCRP)’ ವರದಿಯನ್ನು ಸುವಾರ್ತೆ ಎಂದು ಪರಿಗಣಿಸಲಾಗುವುದಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಈ ವರದಿಯನ್ನು ಆಧರಿಸಿ ತನಿಖೆಯನ್ನು ನಡೆಸಬೇಕು ಎಂಬ ಆಗ್ರಹಗಳ ಕುರಿತು ಕಠಿಣ ಪ್ರಶ್ನೆಗಳನ್ನೆತ್ತಿದೆ ಎಂದು ndtv.com ವರದಿ ಮಾಡಿದೆ.

ಹಿಂಡೆನ್ ಬರ್ಗ್ ವರದಿಯಲ್ಲಿನ ಆರೋಪಗಳನ್ನು ಆಧರಿಸಿ ತನಿಖೆ ನಡೆಸಬೇಕು ಹಾಗೂ ಹಿಂಡೆನ್ ಬರ್ಗ್ ಪ್ರಕರಣದ ಕುರಿತು ವರದಿ ಪಡೆಯಲು ತನ್ನ ಗಡುವನ್ನು ಮೀರಿರುವ ಸೆಬಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅವರಿಗೆ ಕೆಲವೊಂದು ಕಠಿಣ ಪ್ರಶ್ನೆಗಳನ್ನೊಡ್ಡಿತು.

ಈ ತಿಂಗಳ ಆರಂಭದಲ್ಲಿ ಅದಾನಿ ಸಮೂಹದ ವಿರುದ್ಧ ಲಾಭರಹಿತ ‘ಸಂಘಟಿತ ಅಪರಾಧ ಹಾಗೂ ಭ್ರಷ್ಟಾಚಾರ ವರದಿ ಯೋಜನೆ’ಯು ಮಾಡಿರುವ ಆರೋಪಗಳ ಕುರಿತು ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಎದುರು ಅರ್ಜಿ ಸಲ್ಲಿಸಲಾಗಿತ್ತು.

ವಿಚಾರಣೆಯ ಸಂದರ್ಭದಲ್ಲಿ ಹಾಜರಿದ್ದ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಒಸಿಸಿಆರ್ಪಿ ತನ್ನ ವರದಿಯನ್ನು ಸರ್ಕಾರಕ್ಕೆ ಕಳಿಸಿದ್ದರೂ, ವಿವರಗಳನ್ನು ಹಂಚಿಕೊಂಡಿಲ್ಲ. ನಮಗೆ ವಿವರಗಳನ್ನು ಒದಗಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಬದಲಿಗೆ, ಪ್ರಶಾಂತ್ ಭೂಷಣ್ ಅವರೊಂದಿಗೆ ಸಂಪರ್ಕ ಹೊಂದಿರುವ ಸರ್ಕಾರೇತರ ಸಂಸ್ಥೆಯೊಂದರತ್ತ ನಮ್ಮನ್ನು ನಿರ್ದೇಶಿಸಿದರು. ಇದು ಹಿತಾಸಕ್ತಿಯ ಸಂಘರ್ಷವಾಗಿದೆ” ಎಂದು ಸುಪ್ರೀಂ ಕೋರ್ಟ್ ಎದುರು ವಾದಿಸಿದರು.

“ಒಂದು ವೇಳೆ ಇಂತಹ ಸ್ವಪೋಷಿತ ವರದಿಗಳತ್ತ ನಾವೇನಾದರೂ ನೋಡಲು ಪ್ರಾರಂಭಿಸಿದರೆ ನಮ್ಮ ನಿಯಂತ್ರಣ ಸಂಸ್ಥೆಗಳು ಅರ್ಥಹೀನವಾಗಿ ಬಿಡುತ್ತವೆ” ಎಂದೂ ಅವರು ವಾದಿಸಿದರು.

ವಾದ-ವಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, “ನಾವು ಎಚ್ಚರಿಕೆಯಿಂದಿರಬೇಕಾಗಿದೆ. ನಾವು ಯಾವುದೇ ನಡತೆ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ. ನಾವು ಯಾದೃಚ್ಛಿಕ ಆರೋಪಗಳನ್ನು ಮಾಡಲು ಸಾಧ್ಯವಿಲ್ಲ” ಎಂದು ಪ್ರಶಾಂತ್ ಭೂಷಣ್ ಅವರನ್ನುದ್ದೇಶಿಸಿ ಹೇಳಿತು.

ಇದಕ್ಕೂ ಮುನ್ನ, ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯು ಅದಾನಿ ಸಮೂಹಕ್ಕೆ ಕ್ಲೀನ್ ಚಿಟ್ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News