ಉಕ್ರೇನ್ ಯುದ್ಧಕ್ಕೆ ಭಾರತೀಯ ಪ್ರಜೆಗಳ ಮಾನವಕಳ್ಳಸಾಗಣೆ | ಸಿಬಿಐನಿಂದ ನಾಲ್ವರ ಬಂಧನ
ಹೊಸದಿಲ್ಲಿ : ರಶ್ಯ-ಉಕ್ರೇನ್ ಯುದ್ಧ ವಲಯಕ್ಕೆ ಭಾರತೀಯರನ್ನು ದೂಡಿದ ಮಾನವಕಳ್ಳಸಾಗಣೆ ಜಾಲದಲ್ಲಿ ಶಾಮೀಲಾಗಿದ್ದಾರೆಂಬ ಆರೋಪದಲ್ಲಿ ರಶ್ಯ ರಕ್ಷಣಾ ಸಚಿವಾಲಯದ ಗುತ್ತಿಗೆಯ ನೌಕರ ಸೇರಿದಂತೆ ನಾಲ್ವರನ್ನು ಸಿಬಿಐ ಶನಿವಾರ ಬಂಧಿಸಿದೆ.
ಕೇರಳ ತಿರುವನಂತಪುರದ ಅರುಣ್ ಹಾಗೂ ಯೇಸುದಾಸ್ ಜೂನಿಯರ್ ಯಾನೆ ಪ್ರಿಯನ್ ಎಂಬ ಇಬ್ಬರು ನೇಮಕಾತಿ ಮಾಡುವವರು, ರಶ್ಯ ರಕ್ಷಣಾ ಸಚಿವಾಲಯದಲ್ಲಿನ ಗುತ್ತಿಗೆಯಾಧಾರಿತ ಉದ್ಯೋಗಿ ನಿಜಿಲ್ ಜೋಬಿ ಬೆನ್‌ಸಾಮ್ ಹಾಗೂ ಮುಂಬೈ ನಿವಾಸಿ ಆ್ಯಂಥನಿ ಮೈಕಲ್ ಎಲಂಗೋವನ್ ಅವರನ್ನು ಎಪ್ರಿಲ್ 24ರಂದು ಬಂಧಿಸಲಾಗಿತ್ತು.
ಬೆನ್‌ಸಾಮ್ ಹಾಗೂ ಎಲಂಗೋವನ್ ಅವರನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆಯೆಂದು ಸಿಬಿಐ, ಮಂಗಳವಾರ ತಡರಾತ್ರಿ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಆರೋಪಿ ನಿಜ್ಜಿಲ್ ಜೋಬಿ ಬೆನ್‌ಸ್ಯಾಮ್ ರಶ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾನವಸಾಗಣಿಕೆ ಜಾಲದ ಪ್ರಮುಖ ಸದಸ್ಯನಾಗಿದ್ದು, ಆತ ರಶ್ಯನ್ ಸೇನೆಗೆ ಭಾರತೀಯ ಪ್ರಜೆಗಳ ಸೇರ್ಪಡೆಗೆ ನೆರವಾಗುತ್ತಿದ್ದನೆಂದು, ಈ ಬೆಳವಣಿಗೆಗಳ ಬಗ್ಗೆ ಅರಿವಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೆನ್ನೈನಲ್ಲಿ ವೀಸಾ ಪ್ರಕ್ರಿಯೆ ನಡೆಯುವಂತೆ ಮಾಡುವಲ್ಲಿ ಮೈಕಲ್ ಆ್ಯಂಟನಿಯು ಸಹ ಆರೋಪಿಯಾದ ದುಬೈ ನಿವಾಸಿ ಫೈಸಲ್ ಬಾಬಾ ಹಾಗೂ ರಶ್ಯದಿಂದ ಕಾರ್ಯಾಚರಿಸುತ್ತಿರುವ ಇತರಿಗೆ ನೆರವಾಗುತ್ತಿದ್ದನೆಂದು ಸಿಬಿಐ ಹೇಳಿಕೆ ತಿಳಿಸಿದೆ.
ಅರುಣ್ ಹಾಗೂ ಯೇಸುದಾಸ್ ಜೂನಿಯರ್ ಯಾನೆ ಪ್ರಿಯನ್‌ನನ್ನು ಮಂಗಳವಾರ ಬಂಧಿಸಲಾಗಿದೆ. ಕೇರಳ ಹಾಗೂ ತಮಿಳುನಾಡಿನಿಂದ ರಶ್ಯದ ಸೇನೆಗೆ ಭಾರತೀಯ ಪ್ರಜೆಗಳ ಪ್ರಮುಖ ನೇಮಕಾತಿದಾರರೆಂದು ಸಿಬಿಐ ಹೇಳಿಕೆ ತಿಳಿಸಿದೆ.
ಮುಂದಿನ ದಿನಗಳಲ್ಲಿ ಈ ಪ್ರಕರಣಕ್ಕೆ ಇನ್ನೂ ಹಲವಾರು ಮಂದಿಯ ಬಂಧನವಾಗಲಿದೆಯೆಂದು ವರದಿ ತಿಳಿಸಿದೆ.
ಆರೋಪಿಗಳು ಭಾರತೀಯ ಪ್ರಜೆಗಳಿಗೆ ಉತ್ತಮ ವೇತನದ ಭರವಸೆಯೊಂದಿಗೆ ರಶ್ಯದ ಸೇನೆ, ಭದ್ರತಾ ಕಾವಲುಗಾರರು ಹಾಗೂ ಹೆಲ್ಪರ್‌ಗಳಿಗೆ ಸಂಬಂಧಿಸಿದ ಉದ್ಯೋಗಗಳನ್ನು ಕೊಡಿಸುವ ಅಮಿಷವೊಡ್ಡಿ ಅವರನ್ನು ರಶ್ಯಕ್ಕೆ ಸಾಗಾಟ ಮಾಡುತ್ತಿದ್ದರು. ಇದಕ್ಕಾಗಿ ಅವರಿಂದ ದೊಡ್ಡ ಮೊತ್ತದ ಹಣವನ್ನು ಪಡೆದುಕೊಳ್ಳುತ್ತಿದ್ದರು.
ರಶ್ಯಕ್ಕೆ ತಲುಪಿದ ಕೂಡಲೇ ಉದ್ಯೋಗಾಕಾಂಕ್ಷಿಗಳ ಪಾಸ್‌ಪೋರ್ಟ್‌ಗಳನ್ನು ಕಸಿಯಲಾಗುತ್ತಿತ್ತು ಹಾಗೂ ಅವರನ್ನು ಬಲವಂತವಾಗಿ ಯುದ್ಧದ ತರಬೇತಿಗಾಗಿ ರಶ್ಯದ ಸಶಸ್ತ್ರ ಪಡೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು ಮತ್ತು ಅವರ ಇಚ್ಛೆಗೆ ವಿರುದ್ಧವಾಗಿ ಉಕ್ರೇನ್-ರಶ್ಯ ಸಮರವಲಯದ ಮುಂಚೂಣಿ ನೆಲೆಗಳಲ್ಲಿ ನಿಯೋಜಿಸಲಾಗುತ್ತಿತ್ತು. ಈ ಪೈಕಿ ಕೆಲವರು ಯುದ್ದವಲಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ಸಿಬಿಐ ಆಪಾದಿಸಿದೆ.