ಸಂಸತ್ತಿನಲ್ಲಿ ನಾನು ನಿಮ್ಮ ಧ್ವನಿಯಾಗುತ್ತೇನೆ: ನೀಟ್ ಆಕಾಂಕ್ಷಿಗಳಿಗೆ ರಾಹುಲ್ ಗಾಂಧಿ ಭರವಸೆ

Update: 2024-06-09 09:57 GMT

ರಾಹುಲ್ ಗಾಂಧಿ 

ಹೊಸದಿಲ್ಲಿ: ನೀಟ್-ಯುಜಿ ಪ್ರವೇಶ ಪರೀಕ್ಷೆ ವಿವಾದ ಕುರಿತು ನಿಯೋಜಿತ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ರವಿವಾರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಮೋದಿಯವರು ನೂತನ ಅವಧಿಗೆ ಅಧಿಕಾರ ಸ್ವೀಕರಿಸುವ ಮುನ್ನವೇ ಪರೀಕ್ಷೆಯಲ್ಲಿನ ಅವ್ಯವಹಾರಗಳು 24 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹತಾಶಗೊಳಿಸಿವೆ ಎಂದು ಹೇಳಿದ್ದಾರೆ. ‘ಸಂಸತ್ತಿನಲ್ಲಿ ನಾನು ನಿಮ್ಮ ಧ್ವನಿಯಾಗುತ್ತೇನೆ ಮತ್ತು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಮುಖವಾಗಿ ಎತ್ತುತ್ತೇನೆ ’ಎಂದು ಅವರು ತನ್ನ ಎಕ್ಸ್ ಪೋಸ್ಟ್‌ನಲ್ಲಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.

ಒಂದೇ ಪರೀಕ್ಷಾ ಕೇಂದ್ರದಿಂದ ಆರು ವಿದ್ಯಾರ್ಥಿಗಳು ಗರಿಷ್ಠ ಅಂಕಗಳೊಂದಿಗೆ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ ಮತ್ತು ಹಲವರು ತಾಂತ್ರಿಕವಾಗಿ ಸಾಧ್ಯವಿಲ್ಲದ ಅಂಕಗಳನ್ನು ಪಡೆದಿದ್ದಾರೆ,ಆದರೆ ಸರಕಾರವು ಪ್ರಶ್ನೆಪತ್ರಿಕೆ ಸೋರಿಕೆಯನ್ನು ನಿರಂತರವಾಗಿ ನಿರಾಕರಿಸುತ್ತಿದೆ ಎಂದು ಹೇಳಿರುವ ರಾಹುಲ್,‘‘ಶಿಕ್ಷಣ ಮಾಫಿಯಾ ಮತ್ತು ಸರಕಾರಿ ಯಂತ್ರದೊಂದಿಗೆ ಶಾಮೀಲಾಗಿ ನಡೆಯುತ್ತಿರುವ ಈ ‘ಪ್ರಶ್ನೆಪತ್ರಿಕೆ ಸೋರಿಕೆ ಉದ್ಯಮ’ವನ್ನು ಎದುರಿಸಲು ಕಾಂಗ್ರೆಸ್ ಸದೃಢ ಯೋಜನೆಯನ್ನು ಹೊಂದಿತ್ತು. ಕಾನೂನು ತರುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮುಕ್ತಿ ನೀಡುವುದಾಗಿ ನಾವು ನಮ್ಮ ಪ್ರಣಾಳಿಕೆಯಲ್ಲಿ ವಾಗ್ದಾನ ಮಾಡಿದ್ದೆವು ’’ ಎಂದು ಹೇಳಿದ್ದಾರೆ.

ಯುವಜನರು ಇಂಡಿಯಾ ಮೈತ್ರಿಕೂಟದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅದು ಅವರ ಧ್ವನಿಗಳನ್ನು ದಮನಿಸಲು ಅವಕಾಶ ನೀಡುವುದಿಲ್ಲ ಎಂದೂ ರಾಹುಲ್ ಟ್ವೀಟಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News