ಪತ್ರಕರ್ತರ ರಕ್ಷಣೆಗೆ ಕಾನೂನು ರೂಪಿಸಲು, ಸುಳ್ಳುಸುದ್ದಿಗಳ ತಡೆಗೆ ಐಜೆಯು ಆಗ್ರಹ
ಹೊಸದಿಲ್ಲಿ : ಮಾಧ್ಯಮಗಳು ಪ್ರತಿದಿನ ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಿರುವ ಪತ್ರಕರ್ತರು ಮತ್ತು ವಿವಿಧ ಕ್ಷೇತ್ರಗಳ ತಜ್ಞರು ಸತ್ಯವನ್ನು ಅನ್ವೇಷಿಸುವ ಮಾಧ್ಯಮ ಪ್ರತಿನಿಧಿಗಳಿಗೆ ರಕ್ಷಣೆ ನೀಡಲು ಕೇಂದ್ರೀಯ ಕಾನೂನನ್ನು ತರುವಂತೆ ಮತ್ತು ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇಂಡಿಯಾ ಜರ್ನಲಿಸ್ಟ್ಸ್ ಯೂನಿಯನ್ (ಐಜೆಯು) ಆಯೋಜಿಸಿದ್ದ ಅಖಿಲ ಭಾರತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಮಾಧ್ಯಮ ಪ್ರತಿನಿಧಿಗಳು ಮತ್ತು ತಜ್ಞರು ಸುದೀರ್ಘ ಕಾಲದ ಬೇಡಿಕೆಯಾಗಿರುವ ಮಾಧ್ಯಮ ಆಯೋಗದ ಸ್ಥಾಪನೆಗೆ ಆಗ್ರಹಿಸಿದರು. ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ)ಯು ಸಾಂವಿಧಾನಿಕವಾಗಿ ಬಲವಾಗಿದ್ದರೂ ಅದು ಆಯೋಗದ ಅಧಿಕಾರವನ್ನು ಹೊಂದಿಲ್ಲ ಎಂದು ಅವರು ಹೇಳಿದರು.
ವಿಚಾರ ಸಂಕಿರಣದಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ಮಾತನಾಡಿದ ಐಜೆಯು ಅಧ್ಯಕ್ಷ ಶ್ರೀನಿವಾಸ ರೆಡ್ಡಿಯವರು,ಮಾಧ್ಯಮ ಆಯೋಗದ ರಚನೆಯ ಬೇಡಿಕೆಯನ್ನು ಬೆಂಬಲಿಸಿದರು. ಮಾಜಿ ಪಿಸಿಐ ಅಧ್ಯಕ್ಷ ಪಿ.ಬಿ.ಸಾವಂತ ಅವರು ಮಂಡಿಸಿದ್ದ ಮಾದರಿ ಮಾಧ್ಯಮ ಆಯೋಗ ಪ್ರಸ್ತಾವವು ಮೂಲೆಗುಂಪಾಗಿದ್ದು,ಸರಕಾರವು ಅದರ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ ಸುಳ್ಳು ಹೇಳುತ್ತಿದೆ ಎಂದು ವಿಷಾದಿಸಿದರು.
ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಸರ್ವೋಚ್ಚ ನ್ಯಾಯಾಲಯದ ವಕೀಲ ರಾಕೇಶ ಖನ್ನಾ ಮತ್ತು ಮಾಜಿ ಐಎಎಸ್ ಅಧಿಕಾರಿ-ಹಾಲಿ ಸಾಮಾಜಿಕ ಕಾರ್ಯಕರ್ತ ಅಮೋದ ಕಾಂತ್ ಅವರು ಐಜೆಯು ಬೇಡಿಕೆಯನ್ನು ಬೆಂಬಲಿಸಿದರು.