ಎಲ್‌ಎಸಿಯಿಂದ ಭಾರತ-ಚೀನಾ ಸೇನಾ ಹಿಂತೆಗೆತ ಪ್ರಕ್ರಿಯೆ ಪೂರ್ಣ

Update: 2024-10-30 15:06 GMT

PC : PTI 

ಹೊಸದಿಲ್ಲಿ : ನಾಲ್ಕು ವರ್ಷಗಳ ಸಂಘರ್ಷಾವಸ್ಥೆಯ ಬಳಿಕ ವಾಸ್ತವ ಗಡಿನಿಯಂತ್ರಣ ರೇಖೆ (ಎಲ್‌ಎಸಿ)ಯುದ್ದಕ್ಕೂ ನಿಯೋಜಿಸಲಾಗಿದ್ದ ತಮ್ಮ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಭಾರತ ಹಾಗೂ ಚೀನಾ ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ, ಭಾರತೀಯ ಸೇನಾ ಮೂಲಗಳು ಬುಧವಾರ ತಿಳಿಸಿವೆ.

ಉಭಯ ದೇಶಗಳ ಸ್ಥಳೀಯ ಸೇನಾ ತಮಾಂಡರ್‌ಗ ನಡುವೆ ತಳಮಟ್ಟದ ಮಾತುಕತೆಗಳು ಮುಂದುವರಿದಿದ್ದು, ಶೀಘ್ರದಲ್ಲೇ ಗಸ್ತು ಕಾರ್ಯ ಆರಂಭಗೊಳ್ಳಲಿದೆಯೆಂದು ಅವು ಹೇಳಿವೆ, ಸದ್ಭಾವನೆಯ ಸಂಕೇತವಾಗಿ ಉಭಯ ಸೇನಾಪಡೆಗಳು, ಗುರುವಾರ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವ ಯೋಜನೆಯನ್ನು ಹೊಂದಿವೆ.

2020ರ ಜೂನ್‌ನಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ನಡೆದ ಭೀಕರ ಘರ್ಷಣೆಯ ಬಳಿಕ ಏಶ್ಯದ ಈ ಎರಡು ಬೃಹತ್ ರಾಷ್ಟ್ರಗಳ ನಡುವಿನ ಬಾಂಧವ್ಯವು ಹದಗೆಟ್ಟಿತ್ತು. ವಾಸ್ತವ ಗಡಿನಿಯಂತ್ರಣ ರೇಖೆ (ಎಲ್‌ಎಸಿ) ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾಗಳ ನಡುವೆ ಹಲವಾರು ವಾರಗಳಿಂದ ನಡೆಯುತ್ತಿದ್ದ ಮಾತುಕತೆ ಪೂರ್ಣಗೊಂಡಿದ್ದು, 2020ರಲ್ಲಿ ತಲೆದೋರಿದ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಾಗಿದೆಯೆಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಆಕ್ಟೋಬರ್ 21ರಂದು ತಿಳಿಸಿದ್ದರು.

ಪೂರ್ವ ಲಡಾಕ್‌ನ ಎಲ್‌ಎಸಿಯಲ್ಲಿ ಗಸ್ತು ನಡೆಸುವ ಬಗ್ಗೆ ಉಭಯ ದೇಶಗಳ ಸೇನಾ ಕಮಾಂಡರ್‌ಗ ನಡುವೆ ಏರ್ಪಟ್ಟಿದ್ದ ಒಪ್ಪಂದಕ್ಕೆ ಆಕ್ಟೋಬರ್ 23ರಂದು ರಶ್ಯದ ಕಝಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ದ್ವಿಪಕ್ಷೀಯ ಮಾತುಕತೆ ನಡೆಸಿದ ಸಂದರ್ಭ ತಮ್ಮ ಅನುಮೋದನೆಯನ್ನು ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News