ಕೋವಿಡ್ ಯೋಧರಿಗೆ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ ಪ್ರದಾನ
ಹೊಸದಿಲ್ಲಿ : 2022ನೇ ಸಾಲಿನ ಇಂದಿರಾ ಗಾಂಧಿ ಶಾಂತಿ, ನಿಶ್ಶಸ್ತ್ರೀಕರಣ ಮತ್ತು ಅಭಿವೃದ್ಧಿ ಪ್ರಶಸ್ತಿಯನ್ನು ದೇಶದಲ್ಲಿಯ ಕೋವಿಡ್ ಯೋಧರ ಪ್ರತಿನಿಧಿಗಳಾಗಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಮತ್ತು ತರಬೇತಿ ಪಡೆದ ನರ್ಸ್‌ಗಳ ಸಂಘ (ಟಿಎನ್‌ಎಐ)ಕ್ಕೆ ಜಂಟಿಯಾಗಿ ಪ್ರದಾನಿಸಲಾಯಿತು.
ರವಿವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರು ಐಎಂಎ ಅಧ್ಯಕ್ಷ ಡಾ.ಶರದಕುಮಾರ ಅಗರವಾಲ್ ಮತ್ತು ಟಿಎನ್‌ಎಐ ಅಧ್ಯಕ್ಷ ಪ್ರೊಫೆಸರ್ (ಡಾ.) ರಾಯ್ ಕೆ.ಜಾರ್ಜ್ ಅವರಿಗೆ ಪ್ರಶಸ್ತಿಯನ್ನು ಪ್ರದಾನಿಸಿದರು.
ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್‌ನ ಮುಖ್ಯಸ್ಥೆ ಹಾಗೂ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು, ಪ್ರಶಸ್ತಿಯು ಪ್ರತಿ ವೈದ್ಯ, ನರ್ಸ್, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಅವರ ನಿಸ್ವಾರ್ಥ ಸೇವೆ,ಪ್ರತಿಕೂಲ ಪರಿಸ್ಥಿತಿಯಲ್ಲಿ ಸಮರ್ಪಣಾ ಮನೋಭಾವ ಮತ್ತು ಪರಿಶ್ರಮಕ್ಕಾಗಿ ನೀಡಲಾಗಿದೆ ಎಂದು ಹೇಳಿದರು.
20ನೇ ಶತಮಾನದ ಅತ್ಯಂತ ಗಮನಾರ್ಹ ನಾಯಕರಲ್ಲೋರ್ವರಾದ ಇಂದಿರಾ ಗಾಂಧಿಯವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಪ್ರಶಸ್ತಿಯು ಮಾನವತೆ ಮತ್ತು ಈ ಜಗತ್ತಿನ ಸೇವೆಯಲ್ಲಿ ಅನುಸರಣೀಯ ಕೆಲಸವನ್ನು ಮಾಡಿರುವ ಮಹಿಳೆಯರು, ಪುರುಷರು ಮತ್ತು ಸಂಸ್ಥೆಗಳನ್ನು ಗೌರವಿಸುವ ಉದ್ದೇಶವನ್ನು ಹೊಂದಿದೆ ಎಂದರು.
ಕೋವಿಡ್ ಸಾಂಕ್ರಾಮಿಕವನ್ನು ಪ್ರಸ್ತಾಪಿಸಿದ ಸೋನಿಯಾ, ‘ಅದು ಈ ಶತಮಾನವು ಕಂಡ ಅತ್ಯಂತ ವಿನಾಶಕಾರಿ ಘಟನೆಯಾಗಿತ್ತು. ಅದು ಯಾವುದೇ ದೇಶ,ಸಮುದಾಯ ಅಥವಾ ಕುಟುಂಬವನ್ನು ಬಿಡಲಿಲ್ಲ. ಕೋವಿಡ್ ದುಃಸ್ವಪ್ನದ ಸಮಯದಲ್ಲಿ ನಮ್ಮ ವೈದ್ಯರು, ನರ್ಸ್‌ಗಳು, ಅರೆವೈದ್ಯಕೀಯ ಸಿಬ್ಬಂದಿಗಳು, ಆರೋಗ್ಯ ಕಾರ್ಯಕರ್ತರು ಮತ್ತು ಸ್ವಯಂಸೇವಕರು ಈ ಭೀಕರ ಸಾಂಕ್ರಾಮಿಕವು ನಮ್ಮ ದೇಶ ಮತ್ತು ಜಗತ್ತಿಗೆ ಒಡ್ಡಿದ್ದ ಸವಾಲನ್ನು ಹೇಗೆ ಎದುರಿಸಿದ್ದರು ಎನ್ನುವುದನ್ನು ನಾವು ಪ್ರತ್ಯಕ್ಷವಾಗಿ ನೋಡಿದ್ದೇವೆ. ಈ ಕೋವಿಡ್ ಯೋಧರು ನಿಜಕ್ಕೂ ವೈರಸ್ ಮತ್ತು ಜನರ ನಡುವೆ ಅಡ್ಡಗೋಡೆಯಾಗಿ ನಿಂತಿದ್ದರು’ ಎಂದರು.