ರೂ. 32,400 ಕೋಟಿ ಜಿಎಸ್‌ಟಿ ವಂಚನೆ ಆರೋಪ: ಇನ್ಫೋಸಿಸ್‌ಗೆ ಐಟಿ ಇಲಾಖೆ ನೋಟಿಸ್
ಬೆಂಗಳೂರು: ರೂ. 32,403 ಕೋಟಿವರೆಗಿನ ಜಿಎಸ್‌ಟಿ ವಂಚನೆ ಆರೋಪದ ಮೇಲೆ ಐಟಿ ಕಂಪೆನಿ ಇನ್ಫೋಸಿಸ್‌ಗೆ ಪ್ರೀ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.
ಇನ್ಫೋಸಿಸ್ ಲಿಮಿಟೆಡ್‌ನ ಸಾಗರೋತ್ತರ ಶಾಖೆಯ ಕಚೇರಿಗಳಿಂದ ಜುಲೈ 2017 ರಿಂದ ಮಾರ್ಚ್ 2022 ರ ಅವಧಿಯಲ್ಲಿ ಮಾಡಿದ ವೆಚ್ಚಗಳಿಗೆ ಜಿಎಸ್‌ಟಿಯನ್ನು ಪಾವತಿಸಲಾಗಿಲ್ಲ ಎಂದು ಬೆಂಗಳೂರಿನ ಐಟಿ ಅಧಿಕಾರಿಗಳು ಆರೋಪಿಸಿದ್ದಾರೆ.
ಶೋಕಾಸ್ ನೋಟಿಸ್ ಕುರಿತು ಪ್ರತಿಕ್ರಿಯಿಸಿರುವ ಇನ್ಫೋಸಿಸ್, “ಕಂಪನಿಯು ಇದೇ ವಿಷಯದ ಬಗ್ಗೆ ಜಿಎಸ್‌ಟಿ ಇಂಟೆಲಿಜೆನ್ಸ್ ಮಹಾನಿರ್ದೇಶಕರಿಂದ ಪೂರ್ವ ಶೋಕಾಸ್ ನೋಟಿಸ್ ಅನ್ನು ಸ್ವೀಕರಿಸಿದೆ. ಕಂಪನಿಯು ಅದಕ್ಕೆ ಪ್ರತಿಕ್ರಿಯಿಸುವ ಪ್ರಕ್ರಿಯೆಯಲ್ಲಿದೆ" ಎಂದು ಫೈಲಿಂಗ್ ಹೇಳಿದೆ.
ನಿಯಮಗಳ ಪ್ರಕಾರ, ಅಂತಹ ವೆಚ್ಚಗಳಿಗೆ ಜಿಎಸ್‌ಟಿ ಅನ್ವಯಿಸುವುದಿಲ್ಲ ಎಂದು ಕಂಪನಿ ನಂಬುತ್ತದೆ ಎಂದು ಸಂಸ್ಥೆಯು ಹೇಳಿದೆ.
“ಜಿಎಸ್ಟಿ ಕೌನ್ಸಿಲ್ ಶಿಫಾರಸುಗಳ ಮೇಲೆ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು ಹೊರಡಿಸಿದ ಇತ್ತೀಚಿನ ಸುತ್ತೋಲೆಯ ಪ್ರಕಾರ, ಭಾರತೀಯ ಘಟಕಕ್ಕೆ ಸಾಗರೋತ್ತರ ಶಾಖೆಗಳು ಒದಗಿಸುವ ಸೇವೆಗಳು ಜಿಎಸ್ಟಿಗೆ ಒಳಪಡುವುದಿಲ್ಲ" ಎಂದು ಇನ್ಫೋಸಿಸ್ ಹೇಳಿದೆ. ಹಾಗಾಗಿ, "ಇನ್ಫೋಸಿಸ್ ತನ್ನ ಎಲ್ಲಾ ಜಿಎಸ್‌ಟಿ ಬಾಕಿಗಳನ್ನು ಪಾವತಿಸಿದೆ ಮತ್ತು ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ನಿಯಮಗಳಿಗೆ ಸಂಪೂರ್ಣವಾಗಿ ಅನುಸಾರವಾಗಿದೆ" ಎಂದು ಕಂಪನಿ ಹೇಳಿದೆ.