ಯುಎಪಿಎ ಕಾಯ್ದೆಯಡಿ ಜಮ್ಮು ಕಾಶ್ಮೀರ ನ್ಯಾಷನಲ್ ಫ್ರಂಟ್ ಅನ್ನು ನಿಷೇಧಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ: ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆಯನ್ವಯ ನಯೀಮ್ ಅಹ್ಮದ್ ಖಾನ್ ನೇತೃತ್ವದ ಜಮ್ಮು ಕಾಶ್ಮೀರ ನ್ಯಾಷನಲ್ ಫ್ರಂಟ್ ಅನ್ನು ಮಂಗಳವಾರ ಕೇಂದ್ರ ಸರಕಾರ ನಿಷೇಧಿಸಿದೆ.
ತೀವ್ರವಾದಿ ಹುರಿಯತ್ ಕಾನ್ಫರೆನ್ಸ್ನ ಅಂಗಸಂಸ್ಥೆಯಾದ ನ್ಯಾಷನಲ್ ಫ್ರಂಟ್ಗೆ ಕಾನೂನುಬಾಹಿರ ಸಂಪರ್ಕವಿದೆ ಎಂದು ಆರೋಪಿಸಿ, ತಕ್ಷಣದಿಂದಲೇ ಅದನ್ನು ನಿಷೇಧಿಸಿರುವುದಾಗಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಆದೇಶಿಸಿದೆ.
ಜಮ್ಮು ಕಾಶ್ಮೀರ ನ್ಯಾಷನಲ್ ಫ್ರಂಟ್ ದೇಶದ ಏಕತೆ, ಸಾರ್ವಭೌಮತೆ ಹಾಗೂ ಭದ್ರತೆಗೆ ಧಕ್ಕೆಯಾಗುವಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಕೇಂದ್ರ ಸರಕಾರ ಹೇಳಿದೆ.
ಜಮ್ಮು ಕಾಶ್ಮೀರ ನ್ಯಾಷನಲ್ ಫ್ರಂಟ್ ಸದಸ್ಯರು ಉಗ್ರಗಾಮಿ ಚಟುವಟಿಕೆಗಳಿಗೆ ಬೆಂಬಲ ನೀಡುವ ಹಾಗೂ ಜಮ್ಮು ಮತ್ತು ಕಾಶ್ಮೀರ ವಿಭಜನೆಗೆ ತುಪ್ಪ ಸುರಿಯುವಂಥ ಭಾರತ ವಿರೋಧಿ ಕಾರ್ಯಸೂಚಿಯಲ್ಲಿ ಪಾಲ್ಗೊಂಡಿದ್ದಾರೆ ಮತ್ತು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ಸರಕು ಸಾಗಣೆ ನೆರವು ಒದಗಿಸುತ್ತಿದ್ದಾರೆ ಎಂದೂ ಆರೋಪಿಸಲಾಗಿದೆ.
ಈ ಆದೇಶವು ಐದು ವರ್ಷಗಳ ಕಾಲ ಜಾರಿಯಲ್ಲಿರಲಿದೆ.