ಜಾರ್ಖಂಡ್ | ಆಡು ಕಳವುಗೈದ ಆರೋಪದಲ್ಲಿ ಗ್ರಾಮಸ್ಥರಿಂದ ವ್ಯಕ್ತಿಯ ಥಳಿಸಿ ಹತ್ಯೆ ; ನಾಲ್ವರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ | PC : NDTV
ರಾಂಚಿ: ಆಡು ಕಳವುಗೈದ ಆರೋಪದಲ್ಲಿ ಗ್ರಾಮಸ್ಥರು ವ್ಯಕ್ತಿಯೋರ್ವನನ್ನು ಕ್ರೂರವಾಗಿ ಥಳಿಸಿ ಹತ್ಯೆಗೈದ ಘಟನೆ ಜಾರ್ಖಂಡ್‌ನ ಲಾತೆಹಾರ್‌ನಲ್ಲಿ ನಡೆದಿದೆ.
ಥಳಿತಕ್ಕೊಳಗಾಗಿ ಮೃತಪಟ್ಟ ವ್ಯಕ್ತಿಯನ್ನು ಮಧ್ಯಪ್ರದೇಶ ಮೂಲದ ಸಲೀಂ ಖಾನ್ ಎಂದು ಗುರುತಿಸಲಾಗಿದೆ. ಈತ ಲಾತೆಹಾರ್‌ನ ಗೋವಾ ಗ್ರಾಮದಲ್ಲಿರುವ ಇಟ್ಟಿಗೆ ಗೂಡಿನಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.
ಸಲೀಂ ಖಾನ್ ಶನಿವಾರ ರಾತ್ರಿ ಗೆಳೆಯರೊಂದಿಗೆ ಮದ್ಯಪಾನ ಮಾಡಿದ ಬಳಿಕ ಗ್ರಾಮದಲ್ಲಿ ಆಡು ಕಳವುಗೈಯಲು ತೆರಳಿದ್ದ. ಆದರೆ, ಆಡುಗಳು ಕೂಗುವ ಸದ್ದು ಕೇಳಿ ಮನೆ ಮಾಲಿಕೆ ಎಚ್ಚೆತ್ತುಕೊಂಡರು ಹಾಗೂ ಬೊಬ್ಬೆ ಹಾಕಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಾಲಿಕ ಬೊಬ್ಬೆ ಹಾಕಿದಾಗ ಗ್ರಾಮದ ನಿವಾಸಿಗಳು ಅಲ್ಲಿ ಸೇರಿದರು ಹಾಗೂ ಸಲೀಂ ಖಾನ್ ಅಲ್ಲಿಂದ ಓಡಿ ಹೋಗುತ್ತಿರುವುದನ್ನು ನೋಡಿದರು. ಅವರು ಆತನನ್ನು ಸ್ವಲ್ಪ ದೂರದ ವರೆಗೆ ಬೆನ್ನಟ್ಟಿ ಹಿಡಿದರು. ಅಲ್ಲದೆ ಮನ ಬಂದಂತೆ ಥಳಿಸಿದರು ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿದರು. ಸಲೀಂ ಖಾನ್‌ನನ್ನು ಗ್ರಾಮಸ್ತರಿಂದ ರಕ್ಷಿಸಿ ಸದಾರ್ ಆಸ್ಪತ್ರೆಯಲ್ಲಿ ದಾಖಲಿಸಿದರು. ಆದರೆ, ಸಲೀಂ ಖಾನ್ ಚಿಕಿತ್ಸೆಯ ವೇಳೆ ಮೃತಪಟ್ಟರು ಎಂದು ಅವರು ತಿಳಿಸಿದ್ದಾರೆ.
ಗ್ರಾಮದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಲವು ಕಳ್ಳತನದ ಘಟನೆಗಳು ನಡೆದಿವೆ. ಇದರಿಂದ ನಾವು ಸಾಕಷ್ಟು ತೊಂದರೆಗೆ ಒಳಗಾಗಿದ್ದೇವೆ ಎಂದು ಇನ್ನೋರ್ವ ಸ್ಥಳೀಯ ಹೇಳಿದ್ದಾರೆ.
ಕಳೆದ ಕೆಲವು ತಿಂಗಳುಳಿಂದ ತಮ್ಮ ಮನೆಗಳಿಂದ ಆಡುಗಳನ್ನು ಮಾತ್ರವಲ್ಲದೆ, ಜಾನುವಾರುಗಳು ಹಾಗೂ ಕೃಷಿಗೆ ಉಪಯೋಗಿಸುವ ಯಂತ್ರಗಳನ್ನು ಕೂಡ ಕಳವುಗೈಯಲಾಗಿದೆ. ಶನಿವಾರ ರಾತ್ರಿ ಕೂಡ ಕಳ್ಳ ಆಡು ಕಳವುಗೈದು ಓಡಿ ಹೋಗುತ್ತಿದ್ದ. ಗ್ರಾಮಸ್ಥರು ಆತನನ್ನು ಸೆರೆ ಹಿಡಿದರು ಹಾಗೂ ಥಳಿಸಿದರು. ಅನಂತರ ಪೊಲೀಸರಿಗೆ ಹಸ್ತಾಂತರಿಸಿದರು ಎಂದು ಹೆಸರು ಹೇಳಲಿಚ್ಛಿಸದ ಇನ್ನೋರ್ವ ಸ್ಥಳೀಯರು ತಿಳಿಸಿದ್ದಾರೆ.
ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ‘‘ಆಡು ಕಳವಿನ ಆರೋಪದಲ್ಲಿ ಸಲೀಂ ಖಾನ್‌ಗೆ ಗ್ರಾಮಸ್ಥರು ಥಳಿಸಿದ್ದಾರೆ ಎಂದು ಪ್ರಾಥಮಿಕ ತನಿಖೆ ಬಹಿರಂಗಗೊಳಿಸಿದೆ’’ಎಂದು ಸದಾರ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ದುಲ್ಲಾರ್ ಚೌರೆ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ನಾಲ್ವರು ನೇರವಾಗಿ ಭಾಗಿಯಾಗಿದ್ದಾರೆ. ಇತರರು ಕೇವಲ ಘಟನೆಯನ್ನು ನೋಡುವ ಮೂಲಕ ಭಾಗಿಯಾಗಿದ್ದಾರೆ. ಘಟನೆಯಲ್ಲಿ ಭಾಗಿಯಾದ ಎಲ್ಲಾ ನಾಲ್ವರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಹಾಗೂ ಜೈಲಿಗೆ ಕಳುಹಿಸಲಾಗಿದೆ ಎಂದು ದುಲ್ಲರ್ ಚೌರೆ ತಿಳಿಸಿದ್ದಾರೆ.