ಜಾರ್ಖಂಡ್: ಕಾಂಗ್ರೆಸ್-ಜೆಎಂಎಂ ಕೂಟಕ್ಕೆ ವಿಶ್ವಾಸಮತ ನಿರೀಕ್ಷೆ

Update: 2024-07-08 02:54 GMT

ಹೇಮಂತ್ ಸೊರೆನ್  (ಪಿಟಿಐ ಫೋಟೋ)

ರಾಂಚಿ: ನೂತನ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಸೋಮವಾರ ಜಾರ್ಖಂಡ್ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದು, ಕಾಂಗ್ರೆಸ್-ಜೆಎಂಎಂ ಮೈತ್ರಿಕೂಟ ವಿಶ್ವಾಸಮತ ಗಳಿಸುವ ವಿಶ್ವಾಸದಲ್ಲಿದೆ.

ಭೂ ಅವ್ಯವಹಾರಕ್ಕೆ ಸಂಬಂಧಿಸಿದ ಹಣ ದುರುಪಯೋಗ ಪ್ರಕರಣದಲ್ಲಿ ಜಾಮೀನು ದೊರೆತ ಬೆನ್ನಲ್ಲೇ ಜುಲೈ 4ರಂದು ಸೊರೇನ್ ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಸಕ್ತ ವಿಧಾನಸಭೆಯಲ್ಲಿ ಬಹುಮತ ಗಳಿಸಲು 39 ಸದಸ್ಯರ ಅಗತ್ಯವಿದೆ ಎಂದು ಜಾರ್ಖಂಡ್ ವಿಧಾನಸಭಾ ಕಾರ್ಯದರ್ಶಿ ಜಾವೇದ್ ಹೈದರ್ ಹೇಳಿದ್ದಾರೆ.

ಒಟ್ಟು 81 ಸದಸ್ಯಬಲದ ವಿಧಾನಸಭೆಯಲ್ಲಿ ಪ್ರಸ್ತುತ 76 ಮಂದಿ ಶಾಸಕರಿದ್ದು, ಬಿಜೆಪಿ ಹಾಗೂ ಜೆಎಂಎಂನ ತಲಾ ಒಬ್ಬರು ಶಾಸಕರು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ ಜೆಎಂಎಂನ ಸೀತಾ ಸೊರೇನ್ ಬಿಜೆಪಿಗೆ ಸೇರುವ ಮೊದಲು ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದರು. ಸೀತಾ ಸೊರೇನ್ ಅವರು ಹೇಮಂತ್ ಸೊರೇನ್ ಅವರ ಅತ್ತಿಗೆ.

ಒಟ್ಟು 76 ಶಾಸಕರ ಪೈಕಿ 46 ಮಂದಿ ಇಂಡಿಯಾ ಮೈತ್ರಿಕೂಟಕ್ಕೆ ಸೇರಿದವರು. 30 ಮಂದಿ ಎನ್ ಡಿಎ ಬೆಂಬಲಿಗರಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಸುಲಭವಾಗಿ ವಿಶ್ವಾಸಮತ ಗಳಿಸುವ ಭರವಸೆ ನಮಗಿದೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಸತೀಶ್ ಪಾಲ್ ಮುಜಿನಿ ಹೇಳಿದ್ದಾರೆ. ಹೇಮಂತ್ ಸೊರೇನ್ ಅವರು ಜುಲೈ 3ರಂದು ಸರ್ಕಾರ ರಚನೆಗೆ ಮುನ್ನ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಬಳಿ 44 ಶಾಸಕರ ಬೆಂಬಲವನ್ನು ಸಾಬೀತುಪಡಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News