ಜಮ್ಮು ಮತ್ತು ಕಾಶ್ಮೀರ | 370ನೇ ವಿಧಿ ಕುರಿತ ನಿರ್ಣಯವನ್ನು ಹಿಂಪಡೆಯುವವರೆಗೂ ವಿಧಾನಸಭಾ ಕಲಾಪ ನಡೆಯಲು ಬಿಡುವುದಿಲ್ಲ : ಬಿಜೆಪಿ
ಶ್ರೀನಗರ : ಈ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕಿದ್ದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸುವ ಕುರಿತಂತೆ ಈ ಪ್ರಾಂತ್ಯದ ಚುನಾಯಿತ ಪ್ರತಿನಿಧಿಗಳೊಂದಿಗೆ ಕೇಂದ್ರ ಸರಕಾರ ಮಾತುಕತೆ ನಡೆಸಬೇಕು ಎಂಬ ನಿರ್ಣಯವನ್ನು ಹಿಂಪಡೆಯುವವರೆಗೂ ನಾವು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಕಲಾಪ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಬುಧವಾರ ಬಿಜೆಪಿ ಘೋಷಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭಾ ವಿರೋಧ ಪಕ್ಷದ ನಾಯಕ ಸುನೀಲ್ ಶರ್ಮ, “ಇದು ಕಾನೂನುಬಾಹಿರ ನಿರ್ಣಯವಾಗಿದೆ. ಈ ನಿರ್ಣಯವನ್ನು ಹಿಂಪಡೆಯುವವರೆಗೂ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸಲಿದ್ದೇವೆ ಹಾಗೂ ವಿಧಾನಸಭೆಯಲ್ಲಿ ಕಲಾಪ ನಡೆಯಲು ಅವಕಾಶ ನೀಡುವುದಿಲ್ಲ. ಅವರು ಅದನ್ನು ಹಿಂಪಡೆಯಬೇಕು. ನಂತರವಷ್ಟೇ ನಾವು ಆ ಕುರಿತು ಚರ್ಚೆ ನಡೆಸಲಿದ್ದೇವೆ” ಎಂದು ಹೇಳಿದರು.
ಈ ನಿರ್ಣಯವು ವಿಧಾನಸಭಾ ಕಲಾಪ ಪಟ್ಟಿಯಲ್ಲಿರಲಿಲ್ಲ ಹಾಗೂ ಈ ನಿರ್ಣಯವು ಕೇಂದ್ರಾಡಳಿತ ಪ್ರದೇಶದಲ್ಲಿ ನೂತನವಾಗಿ ಚುನಾಯಿತವಾಗಿರುವ ಸರಕಾರದ ಮನಃಸ್ಥಿತಿಯನ್ನು ಪ್ರತಿಫಲಿಸುತ್ತಿದೆ ಎಂದು ಅವರು ಆರೋಪಿಸಿದರು.
ಈ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂವಿಧಾನದ 370ನೇ ವಿಧಿಯ ಮೂಲಕ ಕೊಡಮಾಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಪ್ರಜಾತಂತ್ರದ ಉನ್ನತ ದೇವಾಲಯವಾದ ಲೋಕಸಭೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಅವರು ಹೇಳಿದರು.
“ಆಗ ಕೆಲವು ವ್ಯಕ್ತಿಗಳು ಸಂಸತ್ತಿನ ನಿರ್ಧಾರವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಸಂಸತ್ತಿನ ನಿರ್ಧಾರ ಸರಿ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅಂದಮೇಲೆ, ಇಂತಹ ನಿರ್ಣಯವನ್ನು ತರುವ ಯಾವ ಸಾಂವಿಧಾನಿಕ ಅಧಿಕಾರ ಅವರಿಗಿದೆ? ನಾವು ಈ ನಿರ್ಣಯವನ್ನು ಬಲವಾಗಿ ವಿರೋಧಿಸಿದ್ದೇವೆ ಹಾಗೂ ಬಿಜೆಪಿ ತನ್ನ ಪ್ರತಿಭಟನೆಯನ್ನು ಮುಂದುವರಿಸಲಿದ್ದು, ನಾವು ಯಾವುದೇ ಕಾರಣಕ್ಕೂ ಈ ನಿರ್ಣಯವನ್ನು ಒಪ್ಪಿಕೊಳ್ಳುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ವಿಧಾನಸಭಾ ಸ್ಪೀಕರ್ ಅಬ್ದುಲ್ ರಹೀಂ ರಾಥರ್ ವಿರುದ್ಧವೂ ವಾಗ್ದಾಳಿ ನಡೆಸಿದ ಶರ್ಮ, ಅವರು ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಏಜೆಂಟ್ ನಂತೆ ವರ್ತಿಸುತ್ತಿದ್ದು, ತಮ್ಮ ಹುದ್ದೆಯ ಘನತೆಗೆ ಕುಂದುಂಟು ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಇದೇ ವೇಳೆ ಈ ನಿರ್ಣಯದ ಕುರಿತು ನ್ಯಾಷನಲ್ ಕಾನ್ಫರೆನ್ಸ್ ನ ಮಿತ್ರಪಕ್ಷವಾಗಿರುವ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದೂ ಅವರು ಆಗ್ರಹಿಸಿದರು.
ಇದಕ್ಕೂ ಮುನ್ನ, ಈ ಹಿಂದಿನ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನದ ಕುರಿತು ಚುನಾಯಿತ ಪ್ರತಿನಿಧಿಗಳೊಂದಿಗೆ ಕೇಂದ್ರ ಸರಕಾರವು ಚರ್ಚಿಸಿ, ಅದನ್ನು ಮರು ಸ್ಥಾಪಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ಆಗಸ್ಟ್ 5, 2019ರಂದು ರದ್ದುಗೊಳಿಸಿತ್ತು.